ರಾಮನಗರ: ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದವರೇ ನಮ್ಮಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದೀಗ ನಾನೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ. ಶನಿವಾರ ನಡೆದ ಕಾಂಗ್ರೆಸ್ ಪ್ರಚಾರದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ಕೊಟ್ಟಾಗಿದೆ. ನಿಮ್ಮ ಮನೆ ಮಗ ಡಿಕೆಶಿಗೆ ಒಂದು ಅವಕಾಶ ನೀಡಿ. ಮೇ. 13ಕ್ಕೆ ಫಲಿತಾಂಶ ಬರಲಿದೆ. ನಾನೇ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ಸಿಎಂ ಆದ ಮೊದಲ ಕ್ಯಾಬಿನೆಟ್‌ನಲ್ಲೇ ಕಾಂಗ್ರೆಸ್ ಗ್ಯಾರಂಟಿಗಳಿಗೆ ಅನುಮೋದನೆ ನೀಡುವುದಾಗಿ ಘೋಷಿಸಿದರು.
ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಗಂಗಾಧರ್ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಿಮಿಸಿದ ಡಿಕೆಶಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಗರದ ಸ್ಪನ್ ಸಿಲ್ಕ್ನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊರಟ ಪ್ರಜಾ ಧ್ವನಿಯಾತ್ರೆಗೆ ಗಾಂಧಿ ಭವನದ ಮುಂದೆ ಬೃಹತ್ ಸೇಬಿನ ಹಾರ ಹಾಕಲಾಯಿತು. ಹೆದ್ದಾರಿಯಲ್ಲಿಯೇ ಹಾಕಿದ್ದ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಯ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ 140 ರಿಂದ 150 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ನಾವು ಯಾವುದೇ ಕುತಂತ್ರಕ್ಕೆ ಬೆದರುವುದಿಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿದೆ. ಸರ್ಕಾರದ ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಬರೀ ಸುಳ್ಳು ಹಾಗೂ ಮೋಸ ಮಾಡಿಕೊಂಡು ಸರ್ಕಾರ ಕಾಲ ಕಳೆಯುತ್ತಿದೆ. ಕರ್ನಾಟಕದ ಜನರು ದಡ್ಡರಲ್ಲ. ಒಕ್ಕಲಿಗರು ಹಾಗೂ ಲಿಂಗಾಯತರನ್ನು ಭಿಕ್ಷುಕರಾಗಿ ಮಾಡಲಾಗುತ್ತಿದೆ ಎಂದರು.