ರಾಮನಗರ:ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಪಡೆದ ಸಾಲವನ್ನು ಫಲಾನುಭವಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಬದ್ಧತೆಯನ್ನು ತೋರಿಸುವ ಜೊತೆಗೆ ಇನ್ನೊಬ್ಬ ಮಹಿಳೆಗೆ ನೆರವಾಗುವಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಉದ್ಯೋಗಿನಿ ಹಾಗೂ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲ ಪಡೆದುಕೊಂಡವರು ಸರ್ಕಾರ ಮತ್ತೆ ಸಾಲಮನ್ನಾ ಮಾಡುತ್ತದೆ ಎನ್ನುವ ಇನ್ನೊಬ್ಬರ ಮಾತಿಗೆ ಕಿವಿಗೊಡದೆ ಸಕಾಲದಲ್ಲಿ ಸಾಲದ ಕಂತನ್ನು ಪಾವತಿಸಿ ಸುಸ್ತಿದಾರರಾಗುವುದನ್ನು ತಪ್ಪಿಸಿಕೊಳ್ಳುವುದು ಸೂಕ್ತ ಎನ್ನುವ ಸಲಹೆ ನೀಡಿದರು.
ಮಹಿಳೆಯರಿಗೆ ನಿಗಮದ ವತಿಯಿಂದ ನೀಡಲಾಗುವ ಒಟ್ಟು ಸಾಲದ ಮೊತ್ತದ ಪೈಕಿ ಶೇ. 50ರಷ್ಟು ಮೊತ್ತಕ್ಕೆ ಸಬ್ಸಿಡಿ ಡಿ ನೀಡಲಾಗಿರುತ್ತದೆ. ಇನ್ನುಳಿದ ಶೇ. 50ರಷ್ಟು ಮೊತ್ತವನ್ನು ಅವರುಗಳು ಪಾವತಿಸಬೇಕಾಗಿರುತ್ತದೆ ಎಂದರು.
ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಗತಿಕ ಮಹಿಳೆಯರು, ಅಬಲೆಯರು, ಲಿಂಗತ್ವ ಅಲ್ಪ ಸಂಖ್ಯಾತರು, ಆಶಕ್ತ ಮಹಿಳೆಯರು, ದೇವದಾಸಿಯರು ಮತ್ತು ವಿಧವೆಯರು ಸೇರಿದಂತೆ ಅನೇಕ ಮಹಿಳೆಯರು ಸಾಲ ಪಡೆದುಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಪಡೆದ ಸಾಲವನ್ನು ಮರಳಿ ನೀಡಿದರೆ ಆ ಮೊತ್ತದಿಂದ ಇನ್ನೊಬ್ಬ ಮಹಿಳೆಗೆ ನಿಗಮವು ಸಹಾಯ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ, ಸಾಲ ಪಡೆದು ಅದನ್ನು ಕಟ್ಟುವ ಮೂಲಕ ಬದ್ಧತೆಯನ್ನು ತೋರಿಸಿ ಎಂದರು.
ತರಬೇತಿ ಅವಧಿ ಕಡಿತ: