ರಾಮನಗರ: ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ರೈತರ ಪಟ್ಟಿಯನ್ನು ತಾಲೂಕುವಾರು ಹಾಗೂ ಗ್ರಾಮವಾರು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಸಿಪಿ ಮತ್ತು ಟಿಎಸ್ಪಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸರ್ಕಾರ ನೀಡುವ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು. ಸೌಲಭ್ಯ ದೊರಕಿದವರಿಗೆ ಪುನರಾವರ್ತನೆಯಾಗಬಾರದು. ಹೀಗಾಗಿ, ಯೋಜನೆ ಅನುಷ್ಠಾನಗೊಳ್ಳುವ ಮುನ್ನ ಪಟ್ಟಿ ಸಿದ್ಧಪಡಿಸಬೇಕು. ಆಗ ಮಾತ್ರ ಸುಲಭವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬಹುದು. ಪಟ್ಟಿ ಸಿದ್ಧಪಡಿಸುವಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರ ಸರ್ವೆ ಸಂಖ್ಯೆ, ಬೆಳೆಯುತ್ತಿರುವ ಬೆಳೆ, ವಾರ್ಷಿಕ ವಿವರ, ನೀರಾವರಿ ಮಾಹಿತಿ ಸಂಗ್ರಹಿಸಿ ಪಟ್ಟಿಯನ್ನು ತಪ್ಪದೇ ಮುಂದಿನ ಸಭೆಗೆ ಸಲ್ಲಿಸಬೇಕು ಎಂದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಯವರು ಒಂದು ಎಕರೆಗಿಂತ ಕಡಿಮೆ ಜಮೀನಿರುವ ಸಣ್ಣ ರೈತರನ್ನು ಗುರುತಿಸಿ ಸವಲತ್ತುಗಳನ್ನು ಒದಗಿಸಿದರೆ ಅವರ ಆರ್ಥಿಕ ಮಟ್ಟವನ್ನು ಉತ್ತಮ ರೀತಿಯಲ್ಲಿ ಸುಧಾರಿಸಬಹುದು. ಯೋಜನೆ ಅನುಷ್ಠಾನದ ನಂತರ ಆದ ಬದಲಾವಣೆಗಳ ಬಗ್ಗೆ ತಿಳಿದುಕೊಂಡು ವರದಿ ನೀಡಿ, ಇದರಿಂದ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.