ರಾಮನಗರ:ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಮಾಗಡಿ ಶಾಸಕ ಎ. ಮಂಜುನಾಥ್ ಹಾಗೂ ರಾಮನಗರ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ನಡುವೆ ಮಾತಿನ ಜಟಾಪಟಿ ನಡೆದು ಇಬ್ಬರು ಜಗಳಕ್ಕೆ ಬಿದ್ದ ಘಟನೆ ನಡೆಯಿತು.
ಸಂಸದ ಡಿ ಕೆ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಮಾಡಿದ ಶಾಸಕ ಎ. ಮಂಜುನಾಥ್, ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಮೇಲೆ ಗರಂ ಆಗಿದ್ದರು.
ಜಿಲ್ಲಾಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಸಮರ.. ಮಾಗಡಿ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯಾವ ಮಾಹಿತಿಯೂ ಕೊಡಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಬಾಲಗಂಗಾಧರನಾಥ ಸ್ವಾಮrಯವರ ಹುಟ್ಟೂರಾದ ಬಾನಂದೂರು, ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಈ ಎರಡೂ ಗ್ರಾಮಗಳಿಗೆ ಭೇಟಿ ಕೊಟ್ಟಾಗ ಕ್ಷೇತ್ರದ ಶಾಸಕರಿಗೇ ಜಿಲ್ಲಾಧಿಕಾರಿ ಮಾಹಿತಿ ಕೊಡುತ್ತಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶಿವಕುಮಾರಸ್ವಾಮೀಜಿಯವರ ಎರಡೂ ಗ್ರಾಮಗಳ ಅಭಿವೃದ್ಧಿಗೆ ತಲಾ ₹25 ಕೋಟಿ ಹಣವನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಹೊಸ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವು ಕಾಯ್ತಾ ಇದ್ದೇವೆ, ಈ ಬಗ್ಗೆ ಸಭೆ ಕರೆಯುತ್ತಾರೆ. ಆದರೆ, ಇನ್ನೂ ನಮ್ಮನ್ನ ಕರೆದಿಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆಯಬೇಕು, ನಂತರ ಮಾತನಾಡ್ತೇವೆ ಸರ್ಕಾರ ತಾರತಮ್ಯ ನೀತಿ ಬಿಡಬೇಕು ಎಂದು ಸಂಸದ ಡಿ ಕೆ ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಪ್ರಮುಖವಾಗಿ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು ಸರಬರಾಜು ಯೋಜನೆಗೆ ಸರ್ಕಾರ ತಡೆಯೊಡ್ಡಿರೋದು ಸರಿಯಲ್ಲ, ಕೂಡಲೇ ಕಾಮಗಾರಿಗಳು ಚಾಲನೆಯಾಗಲಿ ಎಂದರು.