ರಾಮನಗರ: ಕಳೆದ ಒಂದೂವರೆ ತಿಂಗಳಿನಿಂದ ರಜೆಯಲ್ಲಿ ಜಾಲಿಯಾಗಿದ್ದ ಚಿಣ್ಣರು ಮೇ.29 ಶಾಲೆಗಳಿಗೆ ಮರಳಬೇಕಿದೆ. ಬೇಸಿಗೆ ರಜೆಯ ಮಜಾ ಮುಗಿಸಿ ನಾಳೆಯಿಂದ ಶಾಲೆಯತ್ತ ಮಕ್ಕಳು ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ.
ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಜ್ಜಾದ ಶಿಕ್ಷಣ ಸಂಸ್ಥೆಗಳು ಅಷ್ಟೇ ಅಲ್ಲದೆ, ಮಕ್ಕಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ಧರಾಗಿದ್ದಾರೆ.
ದಾಖಲಾತಿ ಆಂದೋಲನ ಇನ್ನೂ ಒಂದು ತಿಂಗಳ ಕಾಲ ನಡೆಯಲಿದೆ. ಹಾಗಾಗಿ ಅಂತಿಮ ಮಕ್ಕಳ ದಾಖಲಾತಿ ಸಂಖ್ಯೆ ಪಟ್ಟಿ ಸಿದ್ದಗೊಂಡಿಲ್ಲ. ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿ ತರಬೇತಿ ನೀಡಲಾಗಿದ್ದು, ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಡಿಡಿಪಿಐ ಗಂಗಮಾರೇಗೌಡ ಈಗಾಗಲೇ ಮನವಿ ಮಾಡಿದ್ದಾರೆ.
ಮೇ 28ರಂದು ಶಿಕ್ಷಕರು ಪ್ರಾರಂಭೋತ್ಸವಕ್ಕೆಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಕಾರ್ಯ ಮಾಡುವಂತೆ ಇಲಾಖೆಯು ಶಿಕ್ಷಕರಿಗೆ ಸೂಚಿಸಿದೆ.
ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ನೀಡಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಂದೇಶ ನೀಡಿದ್ದು ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್ ನೀಡುವ ಕುರಿತು ತಿಳಿಸಿ, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ದಾಖಲಾತಿ ಆಂದೋಲನದ ನಂತರವೂ ಅಂತಹ ಮಗು ಕಂಡು ಬಂದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು 1098ಗೆ ಉಚಿತ ಸಹಾಯವಾಣಿಗೆ ಮಾಹಿತಿ ನೀಡುವಂತೆ ಡಿಡಿಪಿಐ ಗಂಗಮಾರೇಗೌಡ ತಿಳಿಸಿದ್ದಾರೆ.