ರಾಮನಗರ:ರೌಡಿ ಶೀಟರ್ ಬರ್ಬರವಾಗಿ ಕೊಂದು ಮೃತದೇಹವನ್ನು ದುಷ್ಕರ್ಮಿಗಳು ಬಿಸಾಕಿ ಹೋಗಿರುವ ಘಟನೆ ಮಾಗಡಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಕೆರೆ ಬಳಿ ಮೃತ ದೇಹ ಪತ್ತೆಯಾಗಿದ್ದು, ಬೆಂಗಳೂರಿನ ಯಲಹಂಕ ನಿವಾಸಿ ಸಂತೋಷ್ (35) ಮೃತ ರೌಡಿಶೀಟರ್ ಎಂದು ಗುರುತಿಸಲಾಗಿದೆ.
ಸಂತೋಷ್ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಎಂದು ಹೇಳಲಾಗುತ್ತಿದೆ. ಈತ ಈ ಹಿಂದೆ ಕೊಲೆ ಮಾಡಿ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ. ಆ ಕೊಲೆಗೆ ಪ್ರತಿಕಾರವಾಗಿ ಸಂತೋಷ್ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ರೌಡಿಶೀಟರ್ ಕಾರ್ತಿಕ್ ಹಲಸೂರು ಹತ್ಯೆ: ಚುನಾವಣೆ ಸಮಯದಲ್ಲಿ ಗಡಿಪಾರು ಆದೇಶ ನೀಡಲಾಗಿದ್ದ ರೌಡಿಶೀಟರ್ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹಲಸೂರಿನ ಜೋಗುಪಾಳ್ಯ ಮುಖ್ಯ ರಸ್ತೆಯಲ್ಲಿ ನಡೆದಿತ್ತು. ಕಾರ್ತಿಕ್ ಹಲಸೂರು ಎಂಬ ರೌಡಿ ಶೀಟರ್ ಕೊಲೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 11ರ ಸಂಜೆ 6 ಗಂಟೆಯ ಸಮಯದಲ್ಲಿ ಹಲಸೂರಿನ ಜೋಗುಪಾಳ್ಯ ಮುಖ್ಯರಸ್ತೆಯಲ್ಲಿ ಕಾರ್ತಿಕ್ ನಡೆದುಕೊಂಡು ಬರುತ್ತಿದ್ದ. ಈ ವೇಳೆ ಮಾರಕಾಸ್ತ್ರಗಳೊಂದಿಗೆ ಬಂದ ಹಂತಕರು ಏಕಾಏಕಿ ಮೇಲೆರಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಾರ್ತಿಕ್ ಪಕ್ಕದಲ್ಲೇ ಇದ್ದ ಗಲ್ಲಿಯಲ್ಲಿ ಓಡಿ ಹೋಗಿದ್ದ. ಹಿಮ್ಮೆಟ್ಟಿ ಬಂದ ಹಂತಕರು ಗುರುತು ಸಿಗದಂತೆ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಯಾದ ಈ ರೌಡಿ ಶೀಟರ್ ಮೇಲೆ ಅತ್ಯಾಚಾರ, ಕೊಲೆ, ಡಕಾಯಿತಿ ಸೇರಿದಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿದ್ದವು.