ರಾಮನಗರ: ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ತಾಲೀಮಿಗೆ ಚಾಲನೆ ನೀಡಿ, ನಂತರ ಸ್ವತಃ ತಾವೇ ಅಣಕು ತಾಲೀಮಿಗೆ ಒಳಗಾದರು.
ಆಸ್ಪತ್ರೆಗೆ ಭೇಟಿ ನೀಡಿದ ಅವರು, ಲಸಿಕೆ ತಾಲೀಮು ನಡೆಸುವ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು. ಅಣಕು ತಾಲೀಮಿಗೆ ಮೊದಲು ತಾವೇ ನೋಂದಾಯಿಸಿಕೊಂಡು ಟೆಂಪರೇಚರ್ ಪರೀಕ್ಷೆಗೆ ಒಳಗಾದರು. ಬಳಿಕ ಲಸಿಕೆ ಪಡೆಯುವ ಹಾಗೂ ಇಪ್ಪತ್ತು ನಿಮಿಷ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರ ನಿಗಾದಲ್ಲಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಇವೆಲ್ಲ ಪ್ರಕ್ರಿಯೆಗಳ ಬಗ್ಗೆ ಡಿಸಿಎಂ ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಲಸಿಕೆ ನೀಡುವ ಕಾರ್ಯಕ್ರಮ ಜನಾಂದೋಲನದ ರೀತಿಯಲ್ಲಿ ಕೈಗೊಳ್ಳಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗುತ್ತದೆ ಎಂದು ಭರವಸೆ ನೀಡಿದರು.
ಸ್ವತಃ ನಾನೇ ಲಸಿಕೆಯನ್ನು ಪಡೆಯುವ ಅಣಕು ಪ್ರಕ್ರಿಯೆಗೆ ಒಳಗಾಗಿದ್ದೇನೆ. ಅತ್ಯಂತ ವೈಜ್ಞಾನಿಕ ಮತ್ತು ಸುರಕ್ಷಿತವಾಗಿ ಇಡೀ ಪ್ರಕ್ರಿಯೆ ನಡೆಯುತ್ತದೆ.ಈ ಲಸಿಕೆ ನೀಡುವುದು ಸವಾಲಿನ ಕೆಲಸ. ಅದಕ್ಕೆ ನಾಲ್ಕು ಹಂತಗಳ ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಲಸಿಕೆ ತಾಲೀಮು ಕೆಲಸ ಕೈಗೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂದು ತಾಲೀಮು ನಡೆಯುತ್ತಿದೆ. ರಾಮನಗರ ಜಿಲ್ಲೆ ಒಂದರಲ್ಲೇ 8,405 ಕೋವಿಡ್ ಯೋಧರಿಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತದ ನಂತರ ಪರಿಶೀಲನೆ, ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದವರನ್ನು ನಿಗಾದಲ್ಲಿ ಇರಿಸುವ ವ್ಯವಸ್ಥೆಯೂ ಆಗುತ್ತದೆ ಎಂದು ತಿಳಿಸಿದರು.