ರಾಮನಗರ: "ಮನುಷ್ಯ ಯಾವ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ಪ್ರಪಂಚದ ಎಲ್ಲಾ ಧರ್ಮಗಳು ಹೇಳುವ ತತ್ವ ಒಂದೇ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಹಾರೋಬೆಲೆ ಗ್ರಾಮದ ಸರ್ಕಲ್‌ನಲ್ಲಿರುವ ಮೇರಿ ಮಾತೆ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, "ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಮೇರಿ ಮಾತೆ ಎಲ್ಲರಿಗೂ ಆರೋಗ್ಯ ನೀಡಲಿ'' ಎಂದು ಪ್ರಾರ್ಥಿಸಿದರು.
"ನಾನು ಹಾರೋಬೆಲೆ ಗ್ರಾಮಕ್ಕೆ ಉಪ ಮುಖ್ಯಮಂತ್ರಿಯಾಗಿಯೋ ಅಥವಾ ಶಾಸಕನಾಗಿಯೋ ಬಂದಿಲ್ಲ. ಸ್ಥಳೀಯ ಸಂಸ್ಥೆಯಿಂದ ಆಯ್ಕೆ ಮಾಡಿ ಉಪ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆಸಿದ್ದೀರಿ. 40 ವರ್ಷಗಳಿಂದ ರಾಜಕೀಯದಲ್ಲಿರಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ದೇವರು ವರ, ಶಾಪ ಎರಡನ್ನೂ ನೀಡುವುದಿಲ್ಲ, ಬದಲಾಗಿ ಅವಕಾಶ ನೀಡುತ್ತಾನೆ. ಈ ಊರಿನ ಅಭಿವೃದ್ಧಿಗೆ ಸರ್ಕಾರ ಎಲ್ಲಾ ಸಹಕಾರ ನೀಡುತ್ತದೆ" ಎಂದು ತಿಳಿಸಿದರು.
"ನಮ್ಮ ಗೆಳೆಯ ಆಗಣ್ಣ ಇದ್ದಿದ್ದರೆ ನನ್ನ ಹಾಗೂ ಸುರೇಶ್ ಅವರ ಬೆಳವಣಿಗೆ ಕಂಡು ಸಂತೋಷ ಪಡುತ್ತಿದ್ದರು. ಎರಡು ಹೋರಿ ಕರುಗಳನ್ನು ತಂದು ನಿಲ್ಲಿಸಿದ್ದೇನೆ ಎಂದು ಚುನಾವಣೆ ಹೊತ್ತಿನಲ್ಲಿ ನಮಗೆ ಬೆಂಬಲವಾಗಿ ನಿಂತು, ನಮ್ಮ ಬೆಳವಣಿಗೆಗೆ ಕಾರಣವಾದರು" ಎಂದು ಮಿತ್ರನನ್ನು ನೆನಪಿಸಿಕೊಂಡರು. "ಡಿ.ಕೆ.ಸುರೇಶ್ ಜನ್ಮ ನೀಡಿದ ಎರಡು ವರ್ಷಗಳ ನಂತರ, ನನ್ನ ತಂಗಿ ಹುಟ್ಟಿದ್ದು ಇದೇ ಊರಿನ ಆಸ್ಪತ್ರೆಯಲ್ಲಿ. ಈ ಊರು ನಮ್ಮ ಕ್ಷೇತ್ರಕ್ಕೆ ಮಾದರಿಯಾದ ಗ್ರಾಮ. ಅನೇಕ ವಿಚಾರಗಳಲ್ಲಿ ಈ ಊರು ಸಾಕ್ಷಿಗುಡ್ಡೆಯಾಗಿ ನಿಂತಿದೆ. ಇಡೀ ಊರಿನ ಜನರು, ಅದರಲ್ಲೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವ ನೀವು ನನ್ನ ಬೆಂಬಲವಾಗಿ ನಿಂತು ಕೈ ಹಿಡಿದಿದ್ದೀರಿ" ಎಂದು ಕೃತಜ್ಞತೆ ಸಲ್ಲಿಸಿದರು.