ಕರ್ನಾಟಕ

karnataka

ETV Bharat / state

ಯಾರೊಬ್ಬರೂ ಒಂದು ರೂಪಾಯಿ ಲಂಚವನ್ನು ಕೊಡಲು ಹೋಗಬೇಡಿ: ಡಿಕೆ ಶಿವಕುಮಾರ್​ ಸಲಹೆ - ಸಾರ್ವಜನಿಕರಿಗೆ ಡಿಕೆ ಶಿವಕುಮಾರ್ ಸಲಹೆ

ನಾವು ಬೆಂಗಳೂರು ಜಿಲ್ಲೆಯವರು. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ. ಭವಿಷ್ಯದಲ್ಲಿ ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ ಎಂದು ತಮ್ಮ ಕ್ಷೇತ್ರದ ಜನರಿಗೆ ಡಿಸಿಎಂ ಡಿಕೆ ಶಿವಕುಮಾರ್​ ಸಲಹೆ ನೀಡಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿರುವ ಡಿಸಿಎಂ
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿರುವ ಡಿಸಿಎಂ

By ETV Bharat Karnataka Team

Published : Dec 2, 2023, 7:38 PM IST

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿರುವ ಡಿಸಿಎಂ

ರಾಮನಗರ:ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ತಿಳಿಸಿದರು. ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆಗೂ ಮುನ್ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿರುವ ಡಿಸಿಎಂ

ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು. ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಕನಕಪುರ - ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ-ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್​​ನಲ್ಲಿ ದೊರೆಯಲಿವೆ ಎಂದರು.

ಜನಸಂಪರ್ಕ ಸಭೆಯ ಉದ್ಘಾಟನೆ

ಈಗಾಗಲೇ ಭೂಮಿ ಯೋಜನೆಯಡಿ ಪಹಣಿ-ಪೋಡಿ ದಾಖಲೆಗಳು ಸಿಗುತ್ತಿವೆ. ದಿಶಾ ವೆಬ್​ಸೈಟ್​ನಲ್ಲಿ ನಿಮ್ಮ ಜಮೀನಿನ ವಾಸ್ತವ ಸ್ಥಿತಿ ತಿಳಿಯುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಆಸ್ತಿಗಳ ಡಿಜಿಟಲೀಕರಣ ಮತ್ತು ಮರು ಸರ್ವೇ ಕೆಲಸ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿ ನನ್ನ ಕ್ಷೇತ್ರದಲ್ಲೂ ಜನರಿಗೆ ಈ ಸೌಲಭ್ಯ ದೊರೆಯಲಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು, ತೊಂದರೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಜನಸ್ಪಂದನ ಸಭೆಯಲ್ಲಿ ಅರ್ಜಿಗಳನ್ನು ನೀಡಿ ಸ್ವೀಕೃತಿ ದಾಖಲೆಗಳನ್ನು ಜನರು ಪಡೆಯಬೇಕು. ಇಲ್ಲಿ ಸಲ್ಲಿಸಿದ ಅಹವಾಲುಗಳನ್ನು ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗುವುದು. ನಾನು ಸಹ ಕಾಲ, ಕಾಲಕ್ಕೆ ಅರ್ಜಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತೇನೆ ಎಂದರು.

ಕನಕಪುರ ತಾಲೂಕಿನಲ್ಲಿ 1,16,290 ಮನೆಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದಿವೆ. ಆದರೆ, 3,200 ಮನೆಗಳಿಗೆ ಈ ಸೌಲಭ್ಯ ತಾಂತ್ರಿಕ ಕಾರಣಗಳಿಂದ ದೊರೆತಿಲ್ಲ. ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಿದ್ದು, ಗೃಹಲಕ್ಷ್ಮಿ ಯೋಜನೆಯ ಅಡಿ ಒಂದಷ್ಟು ಜನರಿಗೆ ತಾಂತ್ರಿಕ ಕಾರಣಗಳಿಂದ ಹಣ ಬಂದಿಲ್ಲ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಸ್ವಲ್ಪ ತಡವಾಗಬಹುದು. ಆದರೆ, ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ತಾಯಿ - ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಪಕ್ಷದ ಜವಾಬ್ದಾರಿ, ಉಪಮುಖ್ಯಮಂತ್ರಿ, ಬೃಹತ್ ನೀರಾವರಿ, ಬೆಂಗಳೂರು ಅಭಿವೃದ್ದಿ ಇಲಾಖೆ ಸೇರಿದಂತೆ ನಾನಾ ಕೆಲಸಗಳ ಒತ್ತಡದ ನಡುವೆ ಕಳೆದ 6 ತಿಂಗಳಿನಿಂದ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಆಗಿರಲಿಲ್ಲ. ಯಾವುದೇ ಇಲಾಖೆಯ ಸಮಸ್ಯೆಗಳು ಇದ್ದರೂ ಜನಸ್ಪಂದನ ಸಭೆಯಲ್ಲಿ ಬಗೆಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನಾವು ಬೆಂಗಳೂರು ಜಿಲ್ಲೆಯವರು: ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ. ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ ಇಲ್ಲೆಲ್ಲಾ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೇ ಅಂದಾಜು ಮಾಡಿ. ನಾನು ಏನೇನು ಮಾಡಲು ಸಾಧ್ಯವೋ ಆ ಕೆಲಸವನ್ನು ಮಾಡಿದ್ದೇನೆ. ಇದಕ್ಕೆ ಎಷ್ಟೊಂದು ವಿವಾದ ಮಾಡಿದರು. ಬೆಂಗಳೂರು ಎಂದ ತಕ್ಷಣ ಏನೇನೋ ವ್ಯಾಖ್ಯಾನ ಪ್ರಾರಂಭವಾಯಿತು. ಇದನ್ನ ವಿರೋಧ ಮಾಡುವವರೆಲ್ಲ ಮಾಡಲಿ, ನಾವು ಬೆಂಗಳೂರು ಜಿಲ್ಲೆಯವರು, ಸೂಕ್ತ ಕಾಲ ಬರುತ್ತದೆ. ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಮಾಡುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಯ ನೀಡಿದರು.

ಇದನ್ನೂ ಓದಿ:ಹೈದರಾಬಾದ್​ಗೆ ಹೋಗುತ್ತೇನೆ, ಪಾರ್ಟಿ ಕೆಲಸ ಏನಿದೆಯೋ ಅದನ್ನು ಮಾಡುತ್ತೇನೆ: ಡಿಸಿಎಂ ಡಿ ಕೆ ಶಿವಕುಮಾರ್​

ABOUT THE AUTHOR

...view details