ರಾಮನಗರ:ಕೋವಿಡ್ ಎರಡನೇ ಅಲೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಟೊಯೋಟಾ ಕಿರ್ಲೋಸ್ಕರ್ ಕಂಪನಿ ಜತೆ ಶುಕ್ರವಾರ ಮಹತ್ವದ ಸಮಾಲೋಚನೆ ನಡೆಸಿದರು.
ವರ್ಚುವಲ್ ವೇದಿಕೆ ಮೂಲಕ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಜತೆ ಚರ್ಚೆ ನಡೆಸಿದ ಡಿಸಿಎಂ, ರಾಮನಗರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ಅಗತ್ಯವಾದ ನೆರವನ್ನು ಕಂಪನಿ ವತಿಯಿಂದ ನೀಡುವಂತೆ ಕೋರಿದರು.
ಈ ಮನವಿಗೆ ಕೂಡಲೇ ಸ್ಪಂದಿಸಿದ ವಿಕ್ರಂ ಕಿರ್ಲೋಸ್ಕರ್ ಅವರು, ತಕ್ಷಣವೇ 1 ಕೋಟಿ ರೂ. ಮೌಲ್ಯದ ವೈದ್ಯಕೀಯ ಉತ್ಪನ್ನಗಳನ್ನು ರಾಮನಗರ ಜಿಲ್ಲೆಗೆ ನೀಡುವುದಾಗಿ ಡಿಸಿಎಂ ಅವರಿಗೆ ತಿಳಿಸಿದರು.
ಕಂಪನಿಯ ಜತೆ ರಾಮನಗರ ಜಿಲ್ಲಾಡಳಿತ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಎಂದು ಈ ಸಂದರ್ಭದಲ್ಲಿ ಡಿಸಿಎಂ ಅವರು ಟೊಯೋಟಾ ಕಿರ್ಲೋಸ್ಕರ್ ಪ್ರತಿನಿಧಿಗಳಿಗೆ ತಿಳಿಸಿದರು.
ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಎಂ, ಕೋವಿಡ್ ನಿರ್ವಹಣೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ. ಟೊಯೋಟಾ ಕಿರ್ಲೋಸ್ಕರ್ ಕಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅವರ ನೆರವು ಕೇಳಿದ್ದೇವೆ ಎಂದರು.
ಮಾಗಡಿ ಮತ್ತು ಕನಕಪುರದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷಾ ಘಟಕಗಳ ಸ್ಥಾಪನೆ, ರಾಮನಗರ ಜಿಲ್ಲೆಗೆ 50 ವೆಂಟಿಲೇಟರ್‌ಗಳು ಮತ್ತು 50 ಪ್ಯಾರಾ ಮಲ್ಟಿ ಮಾನಿಟರ್‌ಗಳು, ಆಕ್ಸಿಜನ್ ಜನರೇಟರ್‌ಗಳು, 200 ಆಕ್ಸಿಜನ್ ಬೆಡ್‌ಗಳು ಬೇಕೆಂದು ನಾವು ಮನವಿ ಮಾಡಿದ್ದೇವೆ. ಈ ಎಲ್ಲ ಬೇಡಿಕೆಗಳಿಗೆ ಕಂಪನಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಿಸಿಎಂ ತಿಳಿಸಿದರು.
ನಗರದ ಎಂ.ಎಸ್.ರಾಮಯ್ಯ, ಮೈಸೂರು ರಸ್ತೆಯ ರಾಜರಾಜೇಶ್ವರಿ ಮತ್ತು ಕನಕಪುರ ರಸ್ತೆಯ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಿಗೆ ತುರ್ತಾಗಿ ಆಕ್ಸಿಜನ್ ಬೆಡ್‌ಗಳ ಅಗತ್ಯವಿದೆ. ಈ ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಇದ್ದು, ಇಂಥ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರಿಗೆ ಇಂಥ ಕಡೆ ಉತ್ತಮ ಚಿಕಿತ್ಸೆ ಕೊಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಇದಾದ ನಂತರ ಡಿಸಿಎಂ ಅವರು ವರ್ಚುವಲ್ ಮೂಲಕವೇ ಫ್ಲಿಪ್‌ಕಾರ್ಟ್ ಪ್ರತಿನಿಧಿಗಳ ಜತೆಯೂ ಮಾತುಕತೆ ನಡೆಸಿದರು.