ರಾಮನಗರ: ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಜಿಲ್ಲಾ ವರದಿಗಾರ ದಿವಂಗತ ಹನುಮಂತು ಕುಟುಂಬಕ್ಕೆ ಉಪಮುಖ್ಯಮಂತ್ರಿ ಸಿ. ಎನ್. ಅಶ್ವತ್ಥ್ ನಾರಾಯಣ್ 5 ಲಕ್ಷ ರೂ.ಗಳ ವೈಯಕ್ತಿಕ ಚೆಕ್ ನೀಡಿದರು.
ಕಳೆದ ಏಪ್ರಿಲ್ 21ರಂದು ಜಿಲ್ಲೆಯ ಜಿಲ್ಲಾ ಕಾರಾಗೃಹದ ಬಳಿ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಖಾಸಗಿ ಟಿವಿ ಜಿಲ್ಲಾ ವರದಿಗಾರ ಹನುಮಂತು ಕೆ ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದು ಎಲ್ಲಾಗಣ್ಯರು ಕಂಬನಿ ಮಿಡಿದಿದ್ದರು.ಆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು.
ಆದ್ರೆ ಅದೇ ಸಮಯಕ್ಕೆ ಬೆಂಗಳೂರಿನ ಖಾಸಗಿ ವಾಹಿನಿಯ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ಖಚಿತ ಪಟ್ಟಿತ್ತು. ಹೀಗಾಗಿ ರಾಮನಗರಕ್ಕೆ ಭೇಟಿ ನೀಡುವುದು ಅನಿವಾರ್ಯವಾಗಿ ಮುಂದೂಡಿಕೆಯಾಗಿತ್ತು.
ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದ್ದು, ಮೇ 8 ರಂದು ಜಿಲ್ಲೆಗೆ ಭೇಟಿ ನೀಡುವುದು ನಿಗದಿಯಾಗಿತ್ತು. ಆದರೆ, ಅದೇ ದಿನ ಸರ್ವಪಕ್ಷಗಳ ಸಭೆ ನಿಗದಿಯಾಗಿದ್ದರಿಂದ ಕಾರ್ಯಕ್ರಮ ಅನಿವಾರ್ಯವಾಗಿ ಮುಂದೂಡಿಕೆಯಾಗಿತ್ತು.
ಇಂದು ತಮ್ಮ ಮಾತಿನಂತೆ ನಡೆದುಕೊಂಡಿರುವ ಉಪಮುಖ್ಯಮಂತ್ರಿ, ಜಿಲ್ಲೆಗೆ ಭೇಟಿ ನೀಡಿದ ಮೊದಲ ದಿನವೇ ಪಡುವಣಗೆರೆಗೆ ತೆರಳಿ ಪರಿಹಾರ ರೂಪದಲ್ಲಿ ವೈಯಕ್ತಿಕ 5 ಲಕ್ಷ ರೂ.ಗಳ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ಹನುಮಂತು ಕುಟುಂಬದವರಿಗೆ ಸ್ವಾಂತನ ಹೇಳಿದ ಅವರು, ಮೃತನ ಪತ್ನಿಗೆ ಕೆಎಂಎಫ್ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಕೆಎಂಎಫ್ ಅಧ್ಯಕ್ಷರಿಗೆ ಪತ್ರ ಬರೆದು, ಅವರ ಜತೆ ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹನುಮಂತು ಪತ್ನಿ ಎನ್. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.