ಕರ್ನಾಟಕ

karnataka

ETV Bharat / state

ನೊಂದ ಜೀವಗಳಿಗೆ ಆಸರೆಯಾದ 'ದಾರಿ ದೀಪ' ಟ್ರಸ್ಟ್​ - Ramnagar

ಹೆತ್ತವರನ್ನು ನಿಷ್ಕರುಣೆಯಿಂದ ನಿರ್ಗತಿಕರನ್ನಾಗಿ ಮಾಡುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ನೊಂದ ಜೀವಗಳಿಗೆ ಆಸರೆ ನೀಡುತ್ತಿದೆ ದಾರಿ ದೀಪ ಟ್ರಸ್ಟ್​.

'Dari deepa'  Old age home.
ನೊಂದ ಜೀವಗಳಿಗೆ ಆಸರೆಯಾದ 'ದಾರಿ ದೀಪ' ಟ್ರಸ್ಟ್​

By

Published : Mar 8, 2021, 7:00 AM IST

Updated : Mar 8, 2021, 7:12 AM IST

ರಾಮನಗರ: ಹೆಣ್ಣು ಅಬಲೆಯಲ್ಲ, ಆಕೆ‌ ಪ್ರತಿಯೊಂದು ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಈ ನಿಟ್ಟಿನಲ್ಲಿ ಎಲೆಮರೆ ಕಾಯಿಯಂತೆ ಸಾಮಾಜಿಕ ಕಾಯಕದಲ್ಲಿ ತೊಡಗಿರುವ ಮಹಿಳೆಯೋರ್ವಳು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ.

ಹೌದು, ಇವರ ಹೆಸರು ಕವಿತಾರಾವ್. ಈವರು ಅನಾಥ ವೃದ್ಧರಿಗೆ ಆಶ್ರಯದಾತೆಯಲ್ಲದೆ, ಅಮ್ಮಂದಿರಿಗೆ ಅಮ್ಮನಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಿವಾಸಿ ಕವಿತಾರಾವ್ ನಗರದ ಸಮೀಪವಿರುವ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ವಾಸವಿದ್ದಾರೆ. 2008ರಲ್ಲಿ ರಸ್ತೆ ಬದಿಯಲ್ಲಿ ಅನಾಥರಾಗಿ ಅಸ್ವಸ್ಥರಾಗಿದ್ದ ವಯಸ್ಸಾದವರನ್ನು ನೋಡಿದ ಅವರಿಗೆ ವೃದ್ಧಾಶ್ರಮ ಆರಂಭಿಸಬೇಕು ಎಂಬ ಕನಸು ಮೂಡಿತು. ಅದರಂತೆ ದಾರಿದೀಪ ಟ್ರಸ್ಟ್ ವೃದ್ಧಾಶ್ರಮ ಪ್ರಾರಂಭಿಸಿದ್ರು.

ವೃದ್ಧಾಶ್ರಮದಲ್ಲಿ 50 ಜನರಿಗೆ ಆಶ್ರಯ

ಇವರು ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ನೃತ್ಯ ಕಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಈ ಹೆಣ್ಣು ಮಕ್ಕಳು ಕಾರ್ಯಕ್ರಮಗಳನ್ನು ನೀಡುವುದರಿಂದ ಬರುವ ಹಣದಿಂದ ವೃದ್ಧಾಶ್ರಮ ನಡೆಸುವ ಆಶಯ ಹೊತ್ತು ಆರಂಭಿಸಿದರು. ಮಕ್ಕಳ ಗಳಿಕೆ ಹಣ ಸಾಲದೆ ಹೋದಾಗ ಪತಿ ನಾಗೇಂದ್ರರಾವ್ ಅವರ ಹೋಟೆಲ್ ಸಂಪಾದನೆಯನ್ನು ಆಶ್ರಮದ ನಿರ್ವಹಣೆಗೆ ಬಳಸಿಕೊಂಡಿದ್ದಾರೆ. ಅರ್ಚಕರಹಳ್ಳಿ ಬಳಿ ವೃದ್ಧಾಶ್ರಮವಿದ್ದು, ವಯಸ್ಸಾದ ಮಹಿಳೆಯರು ಹಾಗೂ ಪುರುಷರು ಸೇರಿ ಇಂದು 50 ಮಂದಿ ಇದ್ದಾರೆ.

ನೊಂದ ಜೀವಗಳಿಗೆ ಆಸರೆಯಾದ 'ದಾರಿ ದೀಪ' ಟ್ರಸ್ಟ್​ ..

ತಾಯಿಯೇ ಪ್ರೇರಣೆ

ದಾರಿ ದೀಪ ವೃದ್ಧಾಶ್ರಮವನ್ನು ಸ್ಥಾಪಿಸಲು ನನ್ನ ಹೆತ್ತ ತಾಯಿ ತಾನಿಬಾಯಿಯ ಸೇವಾ ಮನೋಭಾವ ಪ್ರೇರಣೆಯಾಗಿದೆ. ಅನಕ್ಷರಸ್ಥೆಯಾಗಿದ್ದ ಅವರು ಹೋಟೆಲ್​ ನಡೆಸುತ್ತಿದ್ದರು. ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗಿ ಹಲವು ಕಾರಣಗಳಿಂದ ನಿರ್ಗತಿಕರಾಗಿ ಹೋಟೆಲ್​ ಬಳಿ ಬಂದವರಿಗೆ ನಮ್ಮ ತಾಯಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರಿಗೆ ಊಟವನ್ನ ನೀಡುತ್ತಿದ್ದಾರೆ. ಇದು ನನಗೆ ಪ್ರೇರಣೆ ಎನ್ನುತ್ತಾರೆ ಕವಿತಾರಾವ್.

ವೃದ್ಧಾಶ್ರಮದಲ್ಲಿ ಹಲವು ರಾಜ್ಯ ಹಾಗೂ ಹೊರ ಜಿಲ್ಲೆಗಳ ವಯೋವೃದ್ಧರಿದ್ದಾರೆ. ಈಗಲೂ ಸಾರ್ವಜನಿಕರು ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ನಾವು ಅಲ್ಲಿಗೆ ಹೋಗಿ ವೃದ್ಧರನ್ನ ಕರೆತರುತ್ತೇವೆ. ಕೆಲವರು ಪೋಷಕರನ್ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತಪ್ಪು ವಿಳಾಸವನ್ನು ಕೊಟ್ಟು ಹೊರಟು ಹೋಗಿರುತ್ತಾರೆ. ಅಂತವರನ್ನು ಕೂಡ ಆಶ್ರಮದಲ್ಲಿಟ್ಟುಕೊಂಡು ಸೇವೆ ಮಾಡುತ್ತಿದ್ದಾರೆ. ವೃದ್ಧಾಶ್ರಮವನ್ನ ಪ್ರಾರಂಭಿಸಿ 13 ವರ್ಷಗಳಾಗಿವೆ. ಸರ್ಕಾರದಿಂದ ಈಗ ಅನುದಾನ ಸಿಗುತ್ತಿದೆ. ಸೇವಾ ಮನೋಭಾವ ಇದ್ಧರೆ ಸಾಲದು, ಅದನ್ನುಕಾರ್ಯರೂಪಕ್ಕೆ ತರಬೇಕು ಎಂಬುವುದು ಕವಿತಾ ರಾವ್‌ ಆಶಯವಾಗಿದೆ.

ನೊಂದ ಜೀವಗಳ ಮಾತು

ಪ್ರತಿನಿತ್ಯ ನಮ್ಮ ಯೋಗ ಕ್ಷೇಮ ವಿಚಾರಿಸುತ್ತಾರೆ. ಸ್ನಾನ ಮಾಡಿಸಿ ಬಟ್ಟೆ ಹಾಕಿಸುತ್ತಾರೆ. ಸಮಯಕ್ಕೆ ಊಟ ತಿನ್ನಿಸುತ್ತಾರೆ. ಮಕ್ಕಳಿಂದ ತಿರಸ್ಕರಿಲ್ಪಟ್ಟಿರುವ ನಮಗೆ ಆ ಭಾವನೆ ಬರದಂತೆ ನೋಡಿಕೊಳ್ಳುತ್ತಾರೆ ಎನ್ನುತ್ತಾರೆ ನೊಂದ ಜೀವಗಳು.

ಒಟ್ಟಿನಲ್ಲಿ ಮಕ್ಕಳಿಂದ ಪರಿತ್ಯಕ್ತರಾದ ವಯೋವೃದ್ಧರಿಗೆ ಆಶ್ರಯ ನೀಡಿ ಹಿರಿಯ ಜೀವಗಳ ಬದುಕಿಗೆ ಬೆಳಕು ತೋರಿದ ದಾರಿದೀಪ ಟ್ರಸ್ಟ್​ ಸಂಸ್ಥಾಪಕಿ ಕವಿತಾರಾವ್ ಇತರರಿಗೆ ಮಾದರಿ.

Last Updated : Mar 8, 2021, 7:12 AM IST

ABOUT THE AUTHOR

...view details