ರಾಮನಗರ:ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಈ ವೇಳೆ ಚನ್ನಪಟ್ಟಣದ ಬಿಡಿ ಕಾಲೋನಿ ನಿವಾಸಿಗಳು ಡಿಕೆಶಿ ಮುಂದೆ ಅಳಲು ತೋಡಿಕೊಂಡರು. ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು ಪರಿಹಾರ ನೀಡುವಲ್ಲಿ ತಾರತಮ್ಯ ಎಂಬ ಡಿ ಕೆ ಸುರೇಶ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಕ್ಷೇತ್ರದ ಬಗ್ಗೆ ಡಿ.ಕೆ ಸುರೇಶ್‌ಗೆ ಹೆಚ್ಚಿನ ಕಾಳಜಿ ಇದೆ. ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹದ ವೇಳೆ ಸರ್ಕಾರ ಹೆಚ್ಚು ಪರಿಹಾರ ನೀಡಿತ್ತು. ಈಗ ರಾಮನಗರಕ್ಕೂ ಹೆಚ್ಚು ಪರಿಹಾರ ನೀಡಬೇಕು ಎಂದು ಕಾಳಜಿ ಇಟ್ಟುಕೊಂಡು ಹೇಳಿದ್ದಾರೆ. ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸಂಸದರ ಪರ ಬ್ಯಾಟ್ ಬೀಸಿದ್ದಾರೆ.
ಇದಲ್ಲದೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಸರ್ಕಾರ ಫ್ಲಾನಿಂಗ್ ಇಲ್ಲದೆ ಮಾಡಿದೆ. ಹೆದ್ದಾರಿಯಲ್ಲೇ ಕೆರೆಯ ಹಾಗೆ ನೀರು ನಿಂತಿದೆ. ಕೂಡಲೇ ಕಚ್ಚಾ ಫ್ಲಾನಿಂಗ್ ಮಾಡಿರುವವರ ಬಗ್ಗೆ ಕ್ರಮವಹಿಸಬೇಕು. ಬಹಳ ವರ್ಷಗಳ ನಂತರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಮಳೆಯಾಗಿದೆ. ನಾನು ಚಿಕ್ಕ ಹುಡುಗನಾಗಿದ್ದಾಗ ಇಂತ ಮಳೆ ಬಂದಿತ್ತು. ನಮ್ಮದು ಬಯಲು ಸೀಮೆ, ಈಗ ಹೆಚ್ಚು ಮಳೆ ಆಗಿದೆ. ಮಳೆಯಿಂದ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು.
ಈಗಾಗಲೇ ನಗರಸಭೆ ಆಯುಕ್ತರ ಜೊತೆ ಮಾತನಾಡಿದ್ದೇನೆ. ಸಿಎಂ ಕೂಡಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಅವರಿಗೆ ಪ್ರಾಥಮಿಕ ಪರಿಹಾರ ನೀಡುವಂತೆ ಹೇಳಿದ್ದೇನೆ. ಸರ್ಕಾರ ಬಿಡಿ ಕಾಲೋನಿ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸುತ್ತೇನೆ ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಇದನ್ನೂ ಓದಿ:ವಿಜಯನಗರ ಎಸ್ಪಿ ಕಚೇರಿ ಮುಂದೆ ಕುಟುಂಬದಿಂದ ಆತ್ಮಹತ್ಯೆ ಯತ್ನ: ಸಚಿವರ ವಿರುದ್ಧ ಆರೋಪ!