ಪರಾಜಿತ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ರಾಮನಗರ:ಮಾಜಿ ಸಿಎಂ ಕುಮಾರಸ್ವಾಮಿಯವರು ಚುನಾವಣೆ ಮುಗಿದ ತಕ್ಷಣ ಕಿಂಗ್ ಮೇಕರ್ ಆಗುತ್ತೇನೆಂಬ ಆಸೆಯಿಂದ ವಿದೇಶಕ್ಕೆ ಹಾರಿದ್ದರು. ಆದರೆ ಕರೆಯಲು ಯಾರೂ ಹೋಗದ ಕಾರಣ ಅವರೇ ವಾಪಸ್ ಬರಬೇಕಾಯಿತು ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಲೇವಡಿ ಮಾಡಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿಯವರು ಚನ್ನಪಟ್ಟಣಕ್ಕೆ ಬರಬಾರದಿತ್ತು. ಅದಕ್ಕಾಗಿಯೇ ನಾನು ಸೋತಿದ್ದೇನೆ. ನನ್ನನ್ನು ಸೋಲಿಸಿದವರೂ ಸಹ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಜೊತೆಗೆ ತಮ್ಮ ಮಗನನ್ನು ಸೋಲಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಚುನಾವಣೆಗಳು ಬರುತ್ತಲೇ ಇರುತ್ತವೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಬಾರಿ ಸೋತಿದ್ದೇನೆ. ಜನ ಕಾಂಗ್ರೆಸ್‍ಗೆ ಹೋಗಬೇಕಿತ್ತು, ಪಕ್ಷೇತರವಾಗಿ ಸ್ಪರ್ಧಿಸಬೇಕಿತ್ತು ಎಂದು ಮಾತನಾಡುತ್ತಿದ್ದಾರೆ. ಇದೇನು ಕೊನೆಯ ಚುನಾವಣೆಯಲ್ಲ. ನಾನು ಸೋತಿದ್ದರೂ ಜನರ ಮುಂದೆ ಬಂದಿದ್ದೇನೆ. ನನ್ನ ಗೆಲ್ಲಿಸಬೇಕೆಂದು ಶ್ರಮಪಟ್ಟವರಿಗೆ ಧನ್ಯವಾದ ಎಂದರು.
ಒಕ್ಕಲಿಗ ಜನಾಂಗದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಂಧ ಅಭಿಮಾನದಿಂದ ಜನ ಮತ ನೀಡಿದ್ದರಿಂದ ನಾನು ಸೋತಿದ್ದೇನೆ. ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ತೂಕದ ಸರ್ಕಾರವಾಗಿದೆ. ಬಹುತೇಕ ಹಿರಿಯರು ಗೆದ್ದಿದ್ದಾರೆ. ಸರಿದೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಮುಂದಿನ ಐದು ವರ್ಷಗಳ ಕಾಲ ಈ ಸರ್ಕಾರ ಏನಾಗುತ್ತದೆಯೋ ಎಂಬುದನ್ನು ಹೇಳಲು ಆಗುವುದಿಲ್ಲ ಎಂದು ಯೋಗೇಶ್ವರ್ ತಿಳಿಸಿದರು.
ನಮ್ಮ ತಾಲೂಕಿನ ಜನ 80 ಸಾವಿರಕ್ಕೂ ಹೆಚ್ಚಿನ ಮತವನ್ನು ಭಾರತೀಯ ಜನತಾ ಪಾರ್ಟಿ ಪರವಾಗಿ ಹಾಕಿದ್ದಾರೆ. ಒಂದು ಸರ್ಕಾರದ ವಿರೋಧಿ ಅಲೆ. ಹಾಗೆ ನಿರ್ದಿಷ್ಟ ಕೋಮು ನಮಗೆ ಮತ ಹಾಕಲಿಲ್ಲ. ಬಿಜೆಪಿಗೆ ವಿರೋಧ ಮಾಡಲೇ ಬೇಕು ಎಂಬ ಕೋಮು ನಮಗೆ ನೂರಕ್ಕೆ ನೂರು ಭಾಗ ಮತ ಹಾಕಲಿಲ್ಲ. ಜೊತೆಗೆ ದೇವೇಗೌಡರು, ಕುಮಾರಸ್ವಾಮಿ ಅವರ ಗೋಳು.
ದೇವೇಗೌಡರು ಪ್ರಧಾನ ಮಂತ್ರಿ ಕ್ಷೇತ್ರಕ್ಕೆ ಬಂದರೆ ಅವರು ಕ್ಷೇತ್ರಕ್ಕೆ ಬರುತ್ತಾರೆ. ಅತಂತ್ರ ಸರ್ಕಾರ ಬರುತ್ತದೆ ಮತ್ತೆ ನನ್ನ ಮಗ ಮತ್ತೆ ಮುಖ್ಯಮಂತ್ರಿಯಾಗುತ್ತಾನೆ ಒಂದು ಅವಕಾಶ ಕೊಡಿ ಎಂದು ಬೇಡಿಕೊಳ್ಳುತ್ತಾರೆ. ಇದೆಲ್ಲವು ಬಹುಸಂಖ್ಯಾತ ಒಕ್ಕಲಿಗರಿರುವ ಈ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಅವರ ಮಾತಿಗೆ ಜನ ಗೌರವ ನೀಡಿದ್ದಾರೆ. ಆ ಹಿರಿಯ ಜೀವ ಬಂದು ಕೇಳಿಕೊಳ್ಳುತ್ತಾರೆ ಎಂದು ಜನರು ಅವರಿಗೆ ಕುಮಾರಸ್ವಾಮಿಗೆ ಗೌರವ ನೀಡಬೇಕೆಂದು ಕೊಟ್ಟಿದ್ದಾರೆ. ಆದರೆ ಅವರಿಗೆ ಯಾವತ್ತೂ ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ, ಅಭಿವೃದ್ಧಿ ಇಲ್ಲ. ಎಲ್ಲವನ್ನೂ ಮೀರಿ ನೋಡುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನನಗೆ ಅನುಭವ ಬಂದ ಪ್ರಕಾರ ಜಾತಿ ಕೆಲಸ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಇನ್ನೂ ಮೂರು ವರ್ಷಕ್ಕೂ ಹೆಚ್ಚಿನ ಕಾಲ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ನಾನು ಇಲ್ಲಿನ ಮಣ್ಣಿನ ಮಗ. ನಾನು ಇಲ್ಲಿಯೇ ಇರುತ್ತೇನೆ. ಯುಜಿಡಿ ಯಂತಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಬೇಕು. ನಮ್ಮ ಸೋಲನ್ನು ಈ ಮಹದೇಶ್ವರ ಸನ್ನಿಧಿಯಲ್ಲೇ ಮರೆತುಬಿಡೋಣ, ಕ್ಷೇತ್ರದ ಅಭಿವೃದ್ಧಿ ಕಡೆ ಶ್ರಮಿಸೋಣ ಎಂದರು.
ಇದನ್ನೂ ಓದಿ:ಸಿಎಂ ಆಯ್ಕೆ ಪ್ರಹಸನ ಮುಕ್ತಾಯ: ಡಿಕೆಶಿ, ಸಿದ್ದು ಕೈ ಮೇಲೆತ್ತಿ ಖರ್ಗೆ ಒಗ್ಗಟ್ಟು ಪ್ರದರ್ಶನ