ರಾಮನಗರ:"ನನಗೆ ಟಿಕೆಟ್ ಕೊಡುವ ವಿಶ್ವಾಸ ಇತ್ತು. ಅದರಂತೆ ಚನ್ನಪಟ್ಟಣ ಕ್ಷೇತ್ರಕ್ಕೆ ವರಿಷ್ಠರು ನನ್ನ ಹೆಸರು ಸೂಚಿಸಿದ್ದಾರೆ. ನನಗೆ ಚನ್ನಪಟ್ಟಣ ಕ್ಷೇತ್ರದ ಜವಾಬ್ದಾರಿ ನೀಡಿದ್ದು ಹೋರಾಟಕ್ಕೆ ಸಿದ್ಧವಾಗಿದ್ದೇನೆ" ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, "ನಮ್ಮ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಯೋಗ ಮಾಡಿ ಯಶಸ್ವಿಯಾಗಿದೆ. ನಮ್ಮ ಪಕ್ಷದ ವೈಶಿಷ್ಟ್ಯವೇ ಹಾಗೆ. ಹೊಸಬರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ವಯಸ್ಸಿನ ಕಾರಣ ಅಥವಾ ಇನ್ನಿತರ ಕಾರಣಗಳಿಂದ ಕೆಲವರಿಗೆ ಟಿಕೆಟ್ ನೀಡಿಲ್ಲ. ಆದರೆ, ಹಿರಿಯ ನಾಯಕರಿಗೆ ಪರ್ಯಾಯ ಅವಕಾಶಗಳಿವೆ" ಎಂದರು.
ಇನ್ನು ಕನಕಪುರದಿಂದ ಸಚಿವ ಆರ್ ಅಶೋಕ್ಗೆ ಟಿಕೆಟ್ ನೀಡಿದ ವಿಚಾರವಾಗಿ ಮಾತನಾಡಿದ, "ಕೆಲವು ವಿರೋಧ ಪಕ್ಷದ ನಾಯಕರು ಕೆಲ ಕ್ಷೇತ್ರಗಳಲ್ಲಿ ವಿರೋಧ ಇಲ್ಲದಂತೆ ಮಾಡಿಕೊಂಡಿದ್ದರು. ಅದನ್ನ ತಪ್ಪಿಸಲು ನಮ್ಮ ಪಕ್ಷ ಈ ಹೊಸ ತಂತ್ರ ಬಳಸಿದೆ. ಡಿಕೆಶಿಗೆ ಎದುರಾಳಿಗಳೇ ಇಲ್ಲ ಅನ್ನೋ ಮಾತು ಇತ್ತು. ಅಲ್ಲಿಂದ ಜೆಡಿಎಸ್ ಅಭ್ಯರ್ಥಿಯೇ ಕಾಂಗ್ರೆಸ್ಗೆ ಸೇರಿದ್ದರು. ಹಾಗಾಗಿ ಇಂತಹ ಕ್ಷೇತ್ರಗಳಲ್ಲಿ ಅವರ ವಿರುದ್ಧ ಬಲಿಷ್ಠ ನಾಯಕರನ್ನ ಹಾಕಿದ್ದಾರೆ. ವಿರೋಧಿಗಳನ್ನ ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಒಂದಷ್ಟು ಹೊಸ ಪ್ರಯೋಗ ನಡೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
"ಇದಲ್ಲದೇ ಮಂಡ್ಯದಲ್ಲಿ ನಾನೇ ಕರೆತಂದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ. ಇಂಡವಾಳು ಸಚ್ಚಿದಾನಂದ ಹಾಗೂ ಅಶೋಕ್ ಜಯರಾಂಗೆ ಹೈಕಮಾಂಡ್ ಟಿಕೆಟ್ ನೀಡಿದೆ. ರಾಮನಗರದಲ್ಲೂ ಇಬ್ಬರು ಹೊಸ ಮುಖಗಳಿಗೆ ಮಣೆಹಾಕಲಾಗಿದೆ. ರಾಮನಗರದಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಕನಕಪುರದಲ್ಲಿ ಗೆಲುವು ಸೋಲು ಆಮೇಲೆ. ಆದರೆ, ಪೈಪೋಟಿ ಇದ್ದೇ ಇರುತ್ತೆ. ಈಗ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತೋಕೆ ಆಗುವುದಿಲ್ಲ. ಅವರೂ ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ" ಎಂದರು.