ರಾಮನಗರ:ಸಿ.ಪಿ.ಯೋಗೇಶ್ವರ್ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ. ಕಾಂಗ್ರೆಸ್ನವರು ಆಹ್ವಾನ ಕೊಡಬಹುದು. ಅದು ಸಿಪಿವೈ ಅವರಿಗಿರುವ ಶಕ್ತಿ ಎಂದು ಯೋಗೇಶ್ವರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರಕ್ಕೆ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಸಚಿವರು, ಯೋಗೇಶ್ವರ್ ಮುಂದಿನ ಬಾರಿಯೂ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತಾರೆ. ನಮ್ಮ ಪಕ್ಷದಲ್ಲಿಯೇ ಇರುತ್ತಾರೆ. ಅವರು ಈಗಾಗಲೇ ಹಲವು ಬಾರಿ ಸಚಿವರಾಗಿದ್ದಾರೆ. ನಮ್ಮ ಪಕ್ಷದ ನಾಯಕರು ಕೂಡ ಮುಂದೆ ಸಿಪಿವೈಗೆ ಒಳ್ಳೆಯ ಅವಕಾಶ ನೀಡಲಿದ್ದಾರೆ. 2023ಕ್ಕೆ ಬಿಜೆಪಿಯಿಂದಲೇ ಯೋಗೇಶ್ವರ್ ಸ್ಪರ್ಧೆ ಮಾಡುವುದು ಖಚಿತ. ಯಾವುದೇ ಅನುಮಾನವಿಲ್ಲ ಎಂದರು.
ತೈಲ ದರ ಸಾಕಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೈಲ ದರಕ್ಕೆ ಕಡಿವಾಣ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಇಂಧನ ದರ ಇಳಿಸಿದೆ. ಡೀಸೆಲ್ ಹಾಗು ಪೆಟ್ರೋಲ್ ದರ ಕಡಿಮೆ ಮಾಡುವ ಮೂಲಕ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದರಿಂದ ತೈಲ ಬೆಲೆ ಇಳಿಕೆ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ನವರಿಗೆ ಇದೊಂದು ನೆಪ ಅಷ್ಟೇ. ಬೈ ಎಲೆಕ್ಷನ್ ಬರುತ್ತಲೇ ಇರುತ್ತದೆ. ಬಿಜೆಪಿ ಸೋತಿರುವುದಕ್ಕೂ ಇಂಧನ ದರ ಇಳಿಕೆಗೂ ಯಾವುದೇ ಸಂಬಂಧವಿಲ್ಲ. ಇಂಧನ ದರ ಇಳಿಸಲು ಕೆಲ ತಿಂಗಳಿಂದ ಚರ್ಚೆ ನಡೆಸಲಾಗಿತ್ತು. ಈ ವಿಷಯಕ್ಕೆ ಕಾಂಗ್ರೆಸ್‌ನ ಆರೋಪ ಸತ್ಯಕ್ಕೆ ದೂರವಾಗಿದೆ. ಜನರ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಇಂಧನ ದರ ಕಡಿಮೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದ ಸಿ.ಟಿ. ರವಿ