ರಾಮನಗರ:ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ನೀವು ಲಸಿಕೆ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆದುಕೊಳ್ಳುವಂತೆ ಪ್ರೇರಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ .ಕೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕೋವಿಡ್ ಲಸಿಕಾ ಉತ್ಸವಕ್ಕೆಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಡ್ ಲಸಿಕೆ ಪಡೆದರೆ ಎರಡರಿಂದ ಮೂರು ದಿನ ವಿಶ್ರಾಂತಿ ಪಡೆಯಬೇಕು. ಮೈ,ಕೈ ನೋವು, ಜ್ವರ ಬರುತ್ತದೆ. ಕೆಲಸ ಹಾಗೂ ಹಬ್ಬ ಇದೆ ಎಂದು ಲಸಿಕೆ ಪಡೆಯುವ ಕೆಲಸವನ್ನು ಮುಂದೂಡಬೇಡಿ. ಕೋವಿಡ್ ಯಾವ ರೀತಿ, ಯಾವ ಸಮಯದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೆಚ್ಚಿನ ಜನರು ಲಸಿಕೆ ಪಡೆಯುವುದರಿಂದ ಹರ್ಡ್ ಇಮ್ಯುನಿಟಿ ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿ ಲಸಿಕೆ ಪಡೆದು ಅಡ್ಡ ಪರಿಣಾಮಗಳು ಉಂಟಾಗಿರುವ ಪ್ರಕರಣ ವರದಿಯಾಗಿಲ್ಲ. ಸಾರ್ವಜನಿಕರು ಭಯವಿದ್ದಲ್ಲಿ ಅದರಿಂದ ಹೊರಬಂದು ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ ಎಂದು ಹೇಳಿದರು.