ರಾಮನಗರ:ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈ ತಕ್ಷಣದಿಂದ ನಿಷೇಧಾಜ್ಞೆ ಜಾರಿಗೆ ಬರುವಂತೆ ರಾಮನಗರ ಡಿಸಿ ಆದೇಶಿಸಿದ್ದಾರೆ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಸಿಆರ್ಪಿಸಿ ಸೆಕ್ಷನ್ 144 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿಬಂಧನೆ ಹಾಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ರಾಮನಗರದಲ್ಲಿ ನಿಷೇಧಾಜ್ಞೆ ಮುಂದುವರಿದಿರುತ್ತದೆ ಎಂದು ಡಿಸಿ ತಿಳಿಸಿದ್ದಾರೆ.
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿ, ಷಬ್-ಎ-ಬರತ್, ಗುಡ್‌ಫ್ರೈಡೇ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಮೈದಾನ, ಉದ್ಯಾನಗಳು, ಮಾರುಕಟ್ಟೆಗಳಲ್ಲಿ, ಧಾರ್ಮಿಕ ಸ್ಥಳಗಳು ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಭೆ - ಸಮಾರಂಭಗಳನ್ನು ಆಚರಿಸುವುದನ್ನು ಮತ್ತು ಆಯೋಜಿಸುವುದನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.