ರಾಮನಗರ: ಜನ ವಿರೋಧಿ, ರೈತ ವಿರೋಧಿ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಲೋಕಾಯುಕ್ತ ಸಂಸ್ಥೆ ಅಧಿಕಾರ ಮೊಟಕುಗೊಳಿಸಿದವರು, ಭ್ರಷ್ಟಾಚಾರಕ್ಕೆ ಪೂರಕವಾಗಿರುವವರು ಕಾಂಗ್ರೆಸ್ ಪಕ್ಷದವರೆಂದು ಸಚಿವ ಅಶ್ವತ್ಥ ನಾರಾಯಣ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ಧಾಳಿ ನಡೆಸಿದರು. ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದಲ್ಲಾಳಿಗಳ ಸರ್ಕಾರ, ಅವರ ಹೇಳಿಕೆಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್ಗೆ ಅಶ್ವತ್ಥ ನಾರಾಯಣ್ ಟಾಂಗ್:ಕಾಂಗ್ರೆಸ್ ಸರ್ಕಾರಪವರ್ ಇದ್ದಾಗಲೇ ಪವರ್ ಕಟ್ ಮಾಡಿಕೊಂಡು ಕತ್ತಲೆಯಲ್ಲಿ ಬಜೆಟ್ ಮಂಡಿಸಿದ್ದರು ಎಂದು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಸಚಿವರು ಟಾಂಗ್ ಕೊಟ್ಟರು. ಇದಲ್ಲದೇ ಮೆಡಿಕಲ್ ಕಾಲೇಜು ವಿಚಾರವಾಗಿ ಮಾತನಾಡಿ, ಆರೋಗ್ಯ ವಿವಿ ವಿಚಾರ ಇದೀಗ ಕೋರ್ಟ್ನಲ್ಲಿದೆ. ಮುಗಿದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ಎಷ್ಟಿತ್ತು..? ನಮ್ಮ ಸರ್ಕಾರದ ಬೆಲೆ ಎಷ್ಟಿದೆ ಅನ್ನೋದನ್ನ ಬುದ್ದಿವಂತ ಕೆಪಿಸಿಸಿ ಅಧ್ಯಕ್ಷರು ತೋರಿಸಲಿ. ಅವರ ಸಮಯದಲ್ಲಿ ಯುದ್ಧ ನಡೆದಿರಲಿಲ್ಲ. ಇವತ್ತು ರಷ್ಯಾ, ಉಕ್ರೇನ್ ಯುದ್ಧ ನಡೆಯುತ್ತಿದೆ. ಯುದ್ಧ, ಕೋವಿಡ್ ಸಮಸ್ಯೆ ನಡುವೆಯೂ ಬೆಲೆ ಏರಿಕೆ ನಿಯಂತ್ರಿಸಿದ್ದೇವೆ. ಬೆಲೆ ಏರಿಕೆ ಬಗ್ಗೆಯೇ ಕಾಂಗ್ರೆಸ್ ನಾಯಕರೇ ತಿಳಿಸಲಿ ಎಂದು ಹೇಳಿದರು.
ಬಿಜೆಪಿಯಲ್ಲಿ ಸ್ಯಾಂಟ್ರೋ ರವಿ, ಪೈಟರ್ ರವಿ, ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಕೆ ಹರಿಪ್ರಸಾದ್ ಕೀಳುಮಟ್ಟದ ಹೇಳಿಕೆಗೆ ಉತ್ತರ ಕೊಡದೇ ಇರೋದು ಒಳ್ಳೆಯದು. ಕಾಂಗ್ರೆಸ್ ಪಕ್ಷದ ತುಂಬೆಲ್ಲಾ ಇರುವುದೇ ದಲ್ಲಾಳಿಗಳು. ಕಾಂಗ್ರೆಸ್ ಪಕ್ಷ ದಲ್ಲಾಳಿ ಪಕ್ಷ, ಭ್ರಷ್ಟಾಚಾರ ಬೆಳೆಸಿದವರು. ರೇಟ್ ಕಾರ್ಡ್ ಇಟ್ಟುಕೊಂಡು ಕೆಲಸ ಮಾಡುವವರು. ಫ್ರೀಯಾಗಿ ಎಂದೂ ಕೆಲಸ ಮಾಡಿಲ್ಲ, ಪೇಮೆಂಟ್ ಕೊಟ್ಟರೆ ಮಾತ್ರ ಕೆಲಸ ಮಾಡಿದವರು ಎಂದು ವಾಗ್ದಾಳಿ ನಡೆಸಿದರು.