ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಶಾಸಕರು ಶೀಘ್ರದಲ್ಲೇ ಪಕ್ಷ ತೊರೆಯಲಿದ್ದಾರೆ: ಸಿ.ಪಿ. ಯೋಗೇಶ್ವರ್ - ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ

Former Minister CP Yogeshwar: ''ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಭವಿಷ್ಯದ ಆತಂಕವಿದೆ. ಇದರ ಎಫೆಕ್ಟ್​ ಅನ್ನು ಸಂಕ್ರಾಂತಿ ಸಮಯದಲ್ಲಿ ಎಲ್ಲರೂ ನೋಡುತ್ತೀರಾ. ನಾವು ಯಾವುದೇ ರೀತಿಯ ಆಪರೇಷನ್ ಮಾಡುತ್ತಿಲ್ಲ'' ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

Former Minister C.P. Yogeshwar
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

By ETV Bharat Karnataka Team

Published : Oct 3, 2023, 1:12 PM IST

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯೆ

ರಾಮನಗರ:''ಸಂಕ್ರಾಂತಿಗೆ ವೇಳೆ ಸೂರ್ಯ ಪಥ ಬದಲಿಸುವ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು ಅನುಮಾನ. ಶೀಘ್ರದಲ್ಲೇ ಶಾಸಕರೇ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ'' ಎಂದು ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸೋಮವಾರ ಮಾತನಾಡಿದ ಅವರು, ''2023 ಮುಗಿದ ಬಳಿಕ ರಾಜಕೀಯ ಬದಲಾವಣೆಯಾಗುವ ನಿರೀಕ್ಷೆಯಿದ್ದು, ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಭವಿಷ್ಯದ ಆತಂಕ ಇದೆ. ಹಾಗಾಗಿ ಇದರ ಪರಿಣಾಮವನ್ನು ಸಂಕ್ರಾಂತಿ ವೇಳೆಗೆ ಎಲ್ಲರೂ ನೋಡುತ್ತೀರಾ. ನಾವು ಯಾವುದೇ ರೀತಿಯ ಆಪರೇಷನ್ ಮಾಡುತ್ತಿಲ್ಲ'' ಎಂದರು.

ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳು- ಸಿ.ಪಿ. ಯೋಗೇಶ್ವರ್:''ಕಾಂಗ್ರೆಸ್​ನ ಅಸಮಾಧಾನಗೊಂಡ ಶಾಸಕರು ವಿಮುಖವಾಗಿ ಯೋಚನೆ ಮಾಡುತ್ತಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರು ವೈಯಕ್ತಿಕವಾಗಿ ನನ್ನ ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಡಮ್ಮಿ ಆಗಿದ್ದಾರೆ‌. ಅವರಿಗೆ ಶಾಸಕರಾಗಿ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಹಾಗಾಗಿ ಅನುದಾನ ಕೊಡುತ್ತಿಲ್ಲ ಅಂತ ಹೇಳಿದ್ದಾರೆ‌. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ಇದರಿಂದ ಕಾಂಗ್ರೆಸ್ ಶಾಸಕರು ನಿರುದ್ಯೋಗಿಗಳಾಗಿದ್ದಾರೆ‌'' ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಪಿ. ಯೋಗೇಶ್ವರ್, ''ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲು ಮೈತ್ರಿ ಅನಿವಾರ್ಯ. ಮೈತ್ರಿಯಿಂದ ಬಿಜೆಪಿ- ಜೆಡಿಎಸ್ ಎರಡೂ ಪಕ್ಷಕ್ಕೂ ಅನುಕೂಲ ಆಗಲಿದೆ'' ಎಂದು ಉತ್ತರಿಸಿದರು.

'ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ':''ಮುಂದಿನ ವಾರ ಚನ್ನಪಟ್ಟಣ ಬಿಜೆಪಿ ಸ್ಥಳೀಯ ನಾಯಕರ ಸಭೆ ನಡೆಸುತ್ತೇವೆ. ಮೈತ್ರಿ ಬಗ್ಗೆ ಬೂತ್ ಮಟ್ಟದ ನಾಯಕರು ಮತ್ತು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇವೆ. ಬಳಿಕ ಜೆಡಿಎಸ್ ನಾಯಕರ ಜೊತೆಗೆ ಮತ್ತೊಂದು ಸಭೆ ಮಾಡುತ್ತೇವೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶ ಸಿಕ್ಕರೆ, ನನ್ನನ್ನು ಚುನಾವಣೆಗೆ ನಿಲ್ಲಲು ಸೂಚಿಸಿದರೆ ಸ್ಪರ್ಧೆ ಮಾಡುವೆ. ಒಂದು ವೇಳೆ ಜೆಡಿಎಸ್‌ಗೆ ಕೊಟ್ಟರೆ, ಬೆಂಬಲ ನೀಡುವೆ. ಮುಂದಿನ ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ'' ಎಂದರು.

ಬಿಜೆಪಿ- ಜೆಡಿಎಸ್ ಮತ ಬ್ಯಾಂಕ್‌ ಅಲುಗಾಡಿಸಲು ಸಾಧ್ಯವಿಲ್ಲ- ಯೋಗೇಶ್ವರ್: ''ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಅವರ ದರ್ಪ ಮತ್ತು ದುರಹಂಕಾರಕ್ಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಎಂಬ ಬ್ರಾಂಡ್ ಇದ್ದ ಮುಖಂಡರನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡ ಮಾತ್ರಕ್ಕೆ, ಬಿಜೆಪಿ ಮತ್ತು ಜೆಡಿಎಸ್ ಮತ ಬ್ಯಾಂಕ್‌ ಅಲುಗಾಡಿಸಲು ಸಾಧ್ಯವಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ:"ಶಿವಮೊಗ್ಗದಲ್ಲಿ ಗಲಾಟೆಗೆ ಕಾರಣವಾಗುವ ತಾಯಿ ಬೇರು ಹುಡುಕಬೇಕಿದೆ": ಅವಧೂತ ವಿನಯ್ ಗೂರೂಜಿ

ABOUT THE AUTHOR

...view details