ಕರ್ನಾಟಕ

karnataka

ETV Bharat / state

ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭ..'ಕೈ' ನಾಯಕರ ಹೆಜ್ಜೆಗೆ ಕಾರ್ಯಕರ್ತರ ಬಲ!

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆಗೆ ಕಾವೇರಿ ಸಂಗಮದ ಬಳಿ ಚಾಲನೆ ದೊರೆತಿದೆ.

congress-mekedatu-padayatra-inaugurated-by-mallikarjun-kharge
ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

By

Published : Jan 9, 2022, 9:59 AM IST

Updated : Jan 9, 2022, 2:46 PM IST

ರಾಮನಗರ:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆಗೆ ಕನಕಪುರದ ಕಾವೇರಿ-ಆರ್ಕಾವತಿ ಸಂಗಮದ ಬಳಿ ಹಿರಿಯ ಮುಖಂಡ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಕಾಂಗ್ರೆಸ್ ಪಾದಯಾತ್ರೆ ನಡೆಯುತ್ತಿದೆ.

ಸಾಂಸ್ಕೃತಿಕ ಕಲಾತಂಡಗಳು ಸಮಾರಂಭದ ಆರಂಭಕ್ಕೆ ಮುನ್ನ ಪ್ರದರ್ಶನ ನೀಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು. ಕಾವೇರಿ ನೀರಿನ ಪೂರ್ಣಕುಂಭ ಜಲವನ್ನು ಗಿಡಕ್ಕೆ ನೀರೆರೆದು ಹಾಗೂ ನಗಾರಿ ಬಾರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು. ಮಠಾಧಿಪತಿಗಳು, ಫಾದರ್​​ಗಳು ಗಿಡಕ್ಕೆ ನೀರೆರೆದರು. ಇದಾದ ಬಳಿಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಗಾರಿ ಬಾರಿಸಿದರು. ಎರಡು ಬೃಹತ್ ಕುಂಭಕ್ಕೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ‌ಕಾವೇರಿ ನೀರು ತುಂಬಿಸಿದರು. ಇದರಲ್ಲಿ ಒಂದನ್ನು ಬೆಂಗಳೂರಿಗೆ, ಇನ್ನೊಂದು ರೈತರಿಗಾಗಿ ಸಂಗ್ರಹಿಸಿ ಕೊಂಡೊಯ್ಯಲು ತೀರ್ಮಾನಿಸಲಾಯಿತು.

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬೆಂಗಳೂರು, ವಿವಿಧ ಹಳ್ಳಿಗೆ ಕುಡಿಯುವ ನೀರು, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ 9 ಸಾವಿರ‌ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಕಾಂಗ್ರೆಸ್ ಕಾಳಜಿ ಇಲ್ಲಿ ದೊಡ್ಡದಿದೆ. ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಕ್ಕೂ ನೀರು ಸಿಗಲಿದ್ದು, ರಾಜ್ಯದ ಎಲ್ಲ ಜನರ ನಿರೀಕ್ಷೆ‌ ಇದಾಗಿದೆ. ಯೋಜನೆ ಅನುಷ್ಠಾನದಿಂದ ನೀರಿನ ವಿವಾದಕ್ಕೂ ತೆರೆ ಬೀಳಲಿದೆ ಎಂದರು.

ಯೋಜನೆ ಜಾರಿಗೆ ಆಗ್ರಹಿಸುವ ಛಲ, ಹೋರಾಟ ಮನೋಭಾವ ಕಾಂಗ್ರೆಸ್ ನಾಯಕರದ್ದಾಗಿದ್ದು, 10 ದಿನ ನೂರಾರು ಕೀ.ಮಿ. ದೂರ ಕಾಲ್ನಡಿಗೆ ಮಾಡಲಾಗುತ್ತಿದೆ. ಕೋವಿಡ್ ನಿಯಮ ಪಾಲಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ. ನಮ್ಮ ಪಾದಯಾತ್ರೆ ವಿಫಲಗೊಳಿಸಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಅವಕಾಶ ಕೊಡಬೇಡಬಾರದು. ಅಲ್ಲದೆ ಬಿಜೆಪಿ, ಜೆಡಿಎಸ್ ಮಾತ್ರವಲ್ಲ, ವಿವಿಧ ರಾಜಕೀಯ ಪಕ್ಷಗಳು ಪಾದಯಾತ್ರೆ ವಿಫಲಗೊಳಿಸಲು ಶ್ರಮಿಸುತ್ತಿವೆ ಎಂದು ದೂರಿದರು.

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ ಚಾಲನೆ

11 ದಿನಗಳ ಕಾಲ ಪಾದಯಾತ್ರೆ:

ಮೇಕೆದಾಟು ಸಂಗಮದಿಂದ ಆರಂಭಗೊಂಡಿರುವ ಈ ಪಾದಯಾತ್ರೆಯು ಒಟ್ಟು 11 ದಿನಗಳ ಕಾಲ ನಡೆಯಲಿದೆ. ಕೊನೆಯ ದಿನದಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಭೆ ನಡೆಯಲಿದೆ. ಪಾದಯಾತ್ರೆ ತೆರಳುವ ರಸ್ತೆಯುದ್ದಕ್ಕೂ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿದ್ದು, ಆಯಾ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ತಯಾರಿ ನಡೆಸಿದ್ದಾರೆ.

ಪಾದಯಾತ್ರೆ ಕಾರ್ಯಕ್ರಮದಲ್ಲಿ ಡಿಕೆಶಿ

ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌‌ ಶಿವಕುಮಾರ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್,‌ ಜಿ. ಪರಮೇಶ್ವರ್, ಹೆಚ್.ಎಂ.ರೇವಣ್ಣ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು​ ಸೇರಿದಂತೆ ಕಾಂಗ್ರೆಸ್​​ನ ಬಹುತೇಕ ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ನಟ ದುನಿಯಾ ವಿಜಯ್, ಸಾಧುಕೋಕಿಲ ಸೇರಿ ಹಲವು ನಾಯಕರು, ಹಾಗೂ ಮರಳೆಗವಿಮಠದ ಸ್ವಾಮೀಜಿ, ಆದಿಚುಂಚನಗಿರಿ ‌ಶಾಖಾ ಮಠದ ಕಿರಿಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸಾಥ್​ ನೀಡಿದ್ದಾರೆ.

ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಜನರು

ಇಂದು ಹೆಗ್ಗನೂರು ದೊಡ್ಡ ಆಲಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ ಮಾದಪ್ಪನ ದೊಡ್ಡಿ, ಕರಿಯಣ್ಣನ ದೊಡ್ಡಿ, ಕನಕಪುರ ಟೌನ್, ಗಾಣಾಳು, ಚಿಕ್ಕೇನಹಳ್ಳಿ, ಕೃಷ್ಣಾಪುರ ದೊಡ್ಡಿ, ರಾಮನಗರ ಸಿಟಿ, ಮಾಯಗಾನ ಹಳ್ಳಿ, ಬಿಡದಿ ಟೌನ್, ರಾಜಕುಮಾರ್‌ ಫಾರಂ, ಕೆಂಗೇರಿ, ನ್ಯಾಯಂಡಹಳ್ಳಿ ಜಂಕ್ಷನ್, ಸಾರಕ್ಕಿ ಸಿಗ್ನಲ್, ಮಾರತ್​ಹಳ್ಳಿ ಜಂಕ್ಷನ್, ಕೆ.ಆರ್. ಪುರಂ ಜಂಕ್ಷನ್, ಲಿಂಗರಾಜಪುರ ಜಂಕ್ಷನ್, ಮೇಕ್ರಿ ಸರ್ಕಲ್, ಕಾಂಗ್ರೆಸ್ ಭವನ ತಲುಪಿ ಕೊನೆಯ ದಿನ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಾಗಿ ಅಲ್ಲಿ ಸಮಾರೋಪ ಸಭೆ ನಡೆಯಲಿದೆ.

ಇದನ್ನೂ ಓದಿ:ಕಾವೇರಿ ಸಂಗಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ

Last Updated : Jan 9, 2022, 2:46 PM IST

ABOUT THE AUTHOR

...view details