ಕರ್ನಾಟಕ

karnataka

ETV Bharat / state

ಜನರ ಗಮನ ಸೆಳೆಯುತ್ತಿದೆ ಮೇಕೆದಾಟು ಪಾದಯಾತ್ರೆ - padayatra continued today

ಕಾಂಗ್ರೆಸ್​ನ ಮಹತ್ವಾಕಾಂಕ್ಷಿ ಮೇಕೆದಾಟು ಪಾದಯಾತ್ರೆ ಮುಂದುವರೆದಿದ್ದು, ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

congress mekedatu padayatra
ಮೇಕೆದಾಟು ಪಾದಯಾತ್ರೆ

By

Published : Jan 11, 2022, 9:17 AM IST

ರಾಮನಗರ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಎರಡನೇ ದಿನ ಪೂರೈಸಿದ್ದು, ದಿನ ಕಳೆದಂತೆ ಪಾದಯಾತ್ರೆಗೆ ವಿವಿಧ ಆಯಾಮಗಳಲ್ಲಿ ಜನಪ್ರಿಯತೆ ದೊರೆಯುತ್ತಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಯಿತು. ಪಾದಯಾತ್ರೆಯಲ್ಲಿ ಭಾಗವಹಿಸಿರುವ ನಾಯಕರು ಮತ್ತು ಚಿತ್ರರಂಗದ ಪ್ರಮುಖರ ವಿರುದ್ಧ ನಿಯಮ ಉಲ್ಲಂಘನೆ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ.

ಇನ್ನು ಕಾಂಗ್ರೆಸ್ ನಾಯಕರು ಒಟ್ಟಾಗಿ ಪಾದಯಾತ್ರೆಯಲ್ಲಿ ಭಾಗಿಯಾಗದೇ ಬಿಡಿ ಬಿಡಿಯಾಗಿ ತೆರಳಿದ್ದರು ಎಂಬ ಅಪವಾದ ಕೂಡ ಕೇಳಿ ಬಂದಿದೆ. ಮಧ್ಯಾಹ್ನದವರೆಗೆ ಪಾದಯಾತ್ರೆಯಲ್ಲಿ ಭಾಗಿಯಾದ ಸಿದ್ದರಾಮಯ್ಯ ಅನಾರೋಗ್ಯದ ಕಾರಣ ನೀಡಿ ವಾಪಸ್ ಬೆಂಗಳೂರಿಗೆ ತೆರಳಿದ್ದರು. ಈ ಎಲ್ಲ ಕಾರಣಗಳು ಮೊದಲ ದಿನದ ಪಾದಯಾತ್ರೆಯ ಯಶಸ್ಸನ್ನು ಮಂಕಾಗಿಸಿತ್ತು.

2 ದಿನ ಪೂರೈಸಿದ ಮೇಕೆದಾಟು ಪಾದಯಾತ್ರೆ

ಆದರೆ, ಎರಡನೇ ದಿನ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿ ನಡೆಯುವ ಮೂಲಕ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿರುವ ಪಾದಯಾತ್ರೆ ಕೇವಲ ರಾಜಕೀಯ ಆಶಯ ಈಡೇರಿಕೆಗೆ ಮಾತ್ರವಲ್ಲದೇ ಬೇರೆ ಬೇರೆ ವಿಧದಲ್ಲೂ ಜನಪ್ರಿಯತೆ ಗಳಿಸಿಕೊಳ್ಳಲಿದೆ ಎಂಬ ಸೂಚನೆ ಲಭಿಸಿತು.

ಮರಳೇಗವಿ ಮಠಕ್ಕೆ ಭೇಟಿ:

ನಿನ್ನೆ ಬೆಳಗ್ಗೆ ಪಾದಯಾತ್ರೆ ನಡೆಯುವ ಮಾರ್ಗದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದ ಮರಳೇಗವಿ ಮಠಕ್ಕೆ ಭೇಟಿ ನೀಡಿ, ಡಾ. ಮುಮ್ಮಡಿ ಶಿವರುದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಪಾದಯಾತ್ರೆ ಯಶಸ್ಸಿಗೆ ಶ್ರೀಗಳು ಆಶೀರ್ವದಿಸಿದರು.

ವಿದ್ಯಾರ್ಥಿಗಳಿಗೆ ನೀರಿನ ಮಹತ್ವ ತಿಳಿಹೇಳಿದ ಡಿಕೆಶಿ..

ದೊಡ್ಡಾಲಹಳ್ಳಿ ಸಮೀಪದ ಕೃಷ್ಣಯ್ಯನದೊಡ್ಡಿಯಲ್ಲಿ ಶಾಲಾ ಮಕ್ಕಳು ಡಿಕೆ ಶಿವಕುಮಾರ್ ಅವರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದರು. ಮಕ್ಕಳ ಜೊತೆ ಕೆಲ ಕಾಲ ಸಮಯ ಕಳೆದ ಡಿಕೆ ಶಿವಕುಮಾರ್ ಅವರ ಜೊತೆ ಉಭಯಕುಶಲೋಪರಿ ನಡೆಸಿದರು.

ಪಾದಯಾತ್ರೆ ಸಂದರ್ಭದಲ್ಲಿ ಒಂದಿಷ್ಟು ವಿಶ್ರಾಂತಿಯನ್ನು ಸಹ ಈ ಮೂಲಕ ಪಡೆದ ಡಿಕೆ ಶಿವಕುಮಾರ್, ಮಕ್ಕಳ ಜೊತೆ ಬೆರೆತು ಅವರೊಂದಿಗೆ ವಿವಿಧ ವಿಚಾರಗಳ ಮಾಹಿತಿ ವಿನಿಮಯ ಮಾಡಿಕೊಂಡರು. ಕುಡಿಯುವ ನೀರಿನ ಮಹತ್ವವನ್ನು ಮಕ್ಕಳಿಗೆ ತಿಳಿ ಹೇಳಿದರು.

ಪರಿಸರ ರಕ್ಷಣೆ ಸಂದೇಶ:

ನಿನ್ನೆ ಬೆಳಗ್ಗೆ ಪಾದಯಾತ್ರೆ ಆರಂಭವಾದ ಸಂಗಮ ಸ್ಥಳದಿಂದ ಸಂಜೆವರೆಗಗೂ ರಸ್ತೆ ಉದ್ದಕ್ಕೂ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಪರಿಸರ ರಕ್ಷಣೆ ಸಂದೇಶ ಸಾರಿದರು. ಕಾಂಗ್ರೆಸ್ ಕಾರ್ಯಕರ್ತರು ಸಂಗಮದಿಂದ ದೊಡ್ಡ ಆಲಹಳ್ಳಿವರೆಗೂ ರಸ್ತೆ ಉದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ.

ಎರಡು ಬಿಂದಿಗೆ ನೀರು ಹೊತ್ತ ಹುಸೇನ್:

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಎ. ಹುಸೇನ್ ಅವರು ಮೇಕೆದಾಟು ಪಾದಯಾತ್ರೆ ನಿಮಿತ್ತ ಸಂಗಮದಿಂದ ಬೆಂಗಳೂರಿಗೆ ಎರಡು ಬಿಂದಿಗೆಗಳಲ್ಲಿ ಕಾವೇರಿ ನೀರು ತರುತ್ತಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಅವರು ಒಂದು ಉದ್ದನೆಯ ಬೆತ್ತದ ಕೋಲಿಗೆ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಬಿಂದಿಗೆಗಳನ್ನು ಕಟ್ಟಿಕೊಂಡು, ಅದರಲ್ಲಿ ಸಂಗಮ ಸ್ಥಳದಿಂದ ತುಂಬಿಸಿಕೊಂಡ ಕಾವೇರಿ ನೀರನ್ನು ತೆಗೆದುಕೊಂಡು ಬರುತ್ತಿದ್ದಾರೆ.

ಪಾದಯಾತ್ರೆಯಲ್ಲಿ ನಿರಂತರ ಎರಡು ಬಿಂದಿಗೆಗಳನ್ನು ಹೊತ್ತುಕೊಂಡು ಆಗಮಿಸುತ್ತಿರುವ ಇವರು ಹತ್ತು ದಿನದ ಪಾದಯಾತ್ರೆ ಉದ್ದಕ್ಕೂ ಈ ಬಿಂದಿಗೆಗಳನ್ನು ಹೊತ್ತುಕೊಂಡು ಸಾಗುವುದಾಗಿ ತಿಳಿಸಿದ್ದು, ಅಂತಿಮವಾಗಿ ಬೆಂಗಳೂರಿಗೆ ಆಗಮಿಸಿದ ನಂತರ ಅದನ್ನು ಏನು ಮಾಡಬೇಕೆಂದು ಪಕ್ಷ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಎರಡನೇ ದಿನದ ಪಾದಯಾತ್ರೆಯಲ್ಲಿ ಹಲವು ವಿಶೇಷತೆಗಳು ಜನರ ಗಮನ ಸೆಳೆದವು. ಇನ್ನೂ ಇಂದಿನ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸಹ ಭಾಗವಹಿಸಲಿದ್ದಾರೆ.

ABOUT THE AUTHOR

...view details