ರಾಮನಗರ:ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು 4 ಕಿಲೋ ಮೀಟರ್ ನಡೆಯುತ್ತಿದ್ದಂತೆ ಸುಸ್ತಾಗಿದ್ದಾರೆ. ಅಲ್ಲದೇ ಅನಾರೋಗ್ಯದ ಹಿನ್ನೆಲೆ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.
ಬಳ್ಳಾರಿ ಪಾದಯಾತ್ರೆ ಮಾಡುವಾಗ ಸಿದ್ದರಾಮಯ್ಯ ಅವರಿಗೆ 60 ವರ್ಷ ವಯಸ್ಸಾಗಿತ್ತು. ಆದರೆ ಈಗ ಅವರಿಗೆ 73 ವರ್ಷ ವಯಸ್ಸು. ನಾಲ್ಕು ಕಿಲೋ ಮೀಟರ್ ನಡೆದ ನಂತರ ಒಂದು ಹೆಜ್ಜೆ ಇಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಅವರು ಕಾರಿನಲ್ಲಿ ವಾಪಸ್ ಆಗಿದ್ದಾರೆ.
ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗಿ ಶನಿವಾರ ರಾತ್ರಿಯೇ ಜ್ವರದಿಂದ ಬಳಲಿದ್ದ ಸಿದ್ದರಾಮಯ್ಯ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಲು ತಿಳಿಸಿದ್ದರು. ಹಾಗಾಗಿ ಪಾದಯಾತ್ರೆಯನ್ನು ಉದ್ಘಾಟಿಸಿದ ನಂತರ ಅವರು ಕಾರ್ಯಕರ್ತರ ಜೊತೆ ಕೆಲ ದೂರ ಕ್ರಮಿಸಿದರು. ಆದರೆ ಅವರ ಆರೋಗ್ಯ ಸುಧಾರಿಸದ ಹಿನ್ನೆಲೆ ಪಾದಯಾತ್ರೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ಇಂದು ಕೋವಿಡ್ ಪರೀಕ್ಷೆಗೂ ಸಹ ಒಳಗಾಗಲಿದ್ದಾರೆ ಎಂಬ ಮಾಹಿತಿ ಇದೆ. ಮುಂದಿನ ಎರಡು ದಿನ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ನಂತರ ವೈದ್ಯರ ಸಲಹೆ ಪಡೆದು ಪಾದಯಾತ್ರೆಯಲ್ಲಿ ಭಾಗಿಯಾಗಬೇಕಾ ? ಇಲ್ಲವಾ? ಎನ್ನುವುದನ್ನು ನಿರ್ಧರಿಸಲಿದ್ದಾರೆ.
ಇದನ್ನೂ ಓದಿ: ಕಾವೇರಿ ಸಂಗಮದಿಂದ ಮೇಕೆದಾಟು ಪಾದಯಾತ್ರೆ ಆರಂಭ..'ಕೈ' ನಾಯಕರ ಹೆಜ್ಜೆಗೆ ಕಾರ್ಯಕರ್ತರ ಬಲ!
ಜನವರಿ 18ರವರೆಗೆ ಈ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಗೆ ಇಂದು ಕನಕಪುರ ತಾಲೂಕಿನ ಕಾವೇರಿ ತಟ ಸಂಗಮದಲ್ಲಿ ಚಾಲನೆ ನೀಡಲಾಯಿತು. ಕೋವಿಡ್ ರೂಲ್ಸ್ ಇದ್ದರೂ ಅಪಾರ ಸಂಖ್ಯೆಯಲ್ಲಿ ‘ಕೈ’ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸೇರಿದ್ದಾರೆ.