ರಾಮನಗರ :ಉತ್ತರಪ್ರದೇಶದ ಲಖೀಂಪುರ ಖೇರಿ ರೈತರ ಹತ್ಯೆ ಪ್ರಕರಣವನ್ನ ಖಂಡಿಸಿ ರಾಮನಗರದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಸಿ ಎಂ ಲಿಂಗಪ್ಪ ನೇತೃತ್ವದಲ್ಲಿ ಹೋರಾಟ ನಡೆಯಿತು. ನಗರದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಚಾಲನೆ ನೀಡಿ ರಾಮನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ರಾಮನಗರದಲ್ಲಿ ಕಾಂಗ್ರೆಸ್ ಪಂಜಿನ ಮೆರವಣಿಗೆ.. ಇದೇ ವೇಳೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧವೂ ಕಿಡಿಕಾರಿದರು. ರಾಮನಗರ ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಕ್ಷದ ಪ್ರಮುಖ ಮುಖಂಡರು ಹಾಗೂ ಮಹಿಳೆಯರು ಸಹ ಪಂಜು ಹಿಡಿದು ಹೋರಾಟ ನಡೆಸಿದರು.
ಈ ಸಂದರ್ಭದಲ್ಲಿ ಸಿ.ಎಂ ಲಿಂಗಪ್ಪ ಮಾತನಾಡಿ, ಉತ್ತರಪ್ರದೇಶ ಸರ್ಕಾರ ಜನವಿರೋಧಿ ಸರ್ಕಾರ, ಅಲ್ಲಿನ ಬಿಜೆಪಿ ನಾಯಕರು ಅಫ್ಘಾನಿಸ್ತಾನದ ತಾಲಿಬಾನ್ ರೀತಿ ವರ್ತನೆ ಮಾಡ್ತಿದ್ದಾರೆ. ರೈತರ ಸಾವಿನ ಬಗ್ಗೆ ಪ್ರಧಾನಿಗಳು ಸಹ ಸಾಂತ್ವನದ ಮಾತನಾಡಿಲ್ಲ. ಅವರಿಗೆ ಕೇವಲ ಅವರ ಸರ್ಕಾರ ಉಳಿಯಬೇಕಷ್ಟೇ.. ಮುಂದೆ ಇನ್ನು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜಿ. ಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಮಾಜಿ ಸದಸ್ಯ ರಾಜು ಮುಂತಾದವರಿದ್ದರು.
ಓದಿ:ಬೆಳಗಾವಿಯಲ್ಲಿ ಯುವಕನ ಕೊಲೆ ಪ್ರಕರಣ: ಐವರು ಹಂತಕರಿಗೆ ಪೊಲೀಸ್ ಕಸ್ಟಡಿ, ಇನ್ನೈವರಿಗೆ ನ್ಯಾಯಾಂಗ ಬಂಧನ