ರಾಮನಗರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಾಮನಗರಕ್ಕೆ ಭೇಟಿ ನೀಡುತ್ತಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣ ಮಳೆ ಅವಾಂತರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಹೆಚ್‌ಡಿಕೆ ಚರ್ಚೆ ನಡೆಸಿದ್ದು, ಈ ವೇಳೆ ನೀವು ರಾಮನಗರದಲ್ಲೇ ಇರಿ, ನಾನು ಅಲ್ಲಿಗೆ ಬರುತ್ತೇನೆ ಎಂದು ಕುಮಾರಸ್ವಾಮಿಗೆ ಸಿಎಂ ತಿಳಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ಹೆಲಿಕಾಪ್ಟರ್ ಮೂಲಕ ಸಿಎಂ ಆಗಮಿಸಲಿದ್ದು, ರಾಮನಗರಲ್ಲೇ ಕುಮಾರಸ್ವಾಮಿ ಕಾಯುತ್ತಿದ್ದಾರೆ.
ಇದನ್ನೂ ಓದಿ:ಭಾರಿ ಮಳೆಗೆ ರಾಮನಗರ ರಸ್ತೆಗಳು ಜಲಾವೃತ.. ಬಸ್ನಲ್ಲಿ ಸಿಲುಕಿದ್ದ ಪ್ರಯಾಣಿಕರ ರಕ್ಷಣೆ
ತಕ್ಷಣ ಸಂತ್ರಸ್ತರಿಗೆ ಸರ್ಕಾರವು ಎಲ್ಲ ರೀತಿಯ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ. ನನ್ನ ಮನವಿಗೆ ಓಗೊಟ್ಟು ಜಿಲ್ಲೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಟ್ವೀಟ್ನಲ್ಲಿ ಹೆಚ್‌ಡಿಕೆ ಹೇಳಿದ್ದಾರೆ.
ಸಾರ್ವಜನಿಕರಲ್ಲಿ ನನ್ನ ವಿನಂತಿ: ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಎಂದು ಕುಮಾರಸ್ವಾಮಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿ ಎಂದು ಹೇಳಿದ್ದಾರೆ.
ಬಸ್ಗಳು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಸಿಲುಕಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ಕುಮಾರಸ್ವಾಮಿ ಅವರು ಪರ್ಯಾಯ ವ್ಯವಸ್ಥೆ ಕಲ್ಪಿಸಲು ನೆರವಾಗಿದ್ದಾರೆ.