ರಾಮನಗರ:ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಖುದ್ದು ಅಖಾಡಕ್ಕಿಳಿದು, ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದರು. ರಾಮನಗರದ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮತನಾಡಿದ ಅವರು, ರಾಮನಗರದಲ್ಲಿ ಜೆಡಿಎಸ್ ಪರವಾಗಿ ಅಲ್ಪಸಂಖ್ಯಾತರ ಒಲವಿದೆ. ನಿಖಿಲ್ ಕುಮಾರಸ್ವಾಮಿಗೆ ಉತ್ತಮ ಭವಿಷ್ಯ ಇದೆ. ರಾಮನಗರ ಜನತೆ ದೇವೇಗೌಡರ ಕೈ ಹಿಡಿದ ಹಾಗೆ ನಿಖಿಲ್ ಕುಮಾರಸ್ವಾಮಿ ಅವರನ್ನ ಕೂಡ ಗೆಲ್ಲಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿವೆ. ಬಿಜೆಪಿಗೆ ಸಹಾಯ ಆಗಲೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲ್ಲಬೇಕು ಅಂದಿದ್ರೆ ಡಿ.ಕೆ.ಸುರೇಶ್ ಅವರೇ ನಿಲ್ಲಬೇಕಿತ್ತು. ಆದರೆ ಅವರು ನಿಲ್ಲದೇ ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ನಿಲ್ಲಿಸಿ ಬಲಿಪಶು ಮಾಡಿದ್ದಾರೆ. ಇಲ್ಲಿ ಇಕ್ಬಾಲ್ ಹುಸೇನ್ ಹರಕೆಯ ಕುರಿ ಆಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದ್ರೂ ನಿಖಿಲ್ ಗೆಲುವು ಖಚಿತವಾಗಿದೆ ಎಂದರು.
ಇನ್ನು ಚನ್ನಪಟ್ಟಣಕ್ಕೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ಮಾತನಾಡಿದ ಅವರು, ದೇಶದ ಪ್ರಧಾನಮಂತ್ರಿಗೆ ಈ ರೀತಿಯ ದುರ್ದೈವ ಬರಬಾರದಿತ್ತು. ಎಲ್ಲರೂ ಅಂಗಡಿ ಇಟ್ಕೊಂಡು ಹಣ್ಣು ಮಾರಿದ್ರೆ ಮೋದಿ ಬಂಡಿಲಿ ಇಟ್ಕೊಂಡು ಹಣ್ಣು ಮಾರುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ ಓಟಿಗೋಸ್ಕರ ಫುಟ್ಪಾಗೆ ಬಂದಿದ್ದಾರೆ. ಇದು ದೇಶದ ಸಂಸ್ಕೃತಿಗೆ ಒಳ್ಳೆಯದಲ್ಲ. ಗಂಡು ನೋಡಿ ಹೆಣ್ಣು ಕೊಡಿ, ಅವರಪ್ಪನನ್ನು ನೋಡಿ ಹೆಣ್ಣು ಕೊಡಬೇಡಿ. ಮೋದಿ ನೋಡಿ ಓಟ್ ಹಾಕಬೇಡಿ, ನಿಂತಿರೋ ಕ್ಯಾಂಡಿಡೇಟ್ ನೋಡಿ ಮತ ಹಾಕಿರಿ. ಎಂದು ಮೋದಿ ಆಗಮನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಗಿ ಮಾತನಾಡಿದರು.