ರಾಮನಗರ:ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಅಶ್ಚತ್ಥ ನಾರಾಯಣ, ಡಿ.ಕೆ ಸುರೇಶ್ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ನಡೆದಿದೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಬಳಿಕ ವೇದಿಕೆಯಲ್ಲಿ ಡಿ.ಕೆ ಸುರೇಶ್ ಬೆಂಬಲಿಗರು ಮುಖ್ಯಮಂತ್ರಿ ಎದುರೇ 'ಡಿ.ಕೆ,ಡಿ.ಕೆ' ಅಂತ ಘೋಷಣೆ ಕೂಗಿದ್ದಲ್ಲದೇ ಸಚಿವ ಅಶ್ವಥ್ ನಾರಾಯಣ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದರು.
ಸಚಿವ ಅಶ್ವತ್ಥ ನಾರಾಯಣ್ ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಯಾರು ಮಾಡಿಲ್ಲ. ಬಿಜೆಪಿ ಪಕ್ಷ ಮಾತ್ರ ಮಾಡಿರುವುದು ಎಂದು ಭಾಷಣ ಮಾಡ್ತಿದ್ದರು. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನಾವು ಆರಂಭಿಸಿದ ಕಾಮಗಾರಿ ನಮ್ಮ ಅವಧಿಯಲ್ಲೆ ಮುಗಿಸುತ್ತೇವೆ. ಇತರೆ ಪಕ್ಷದ ಹಾಗೆ ವರ್ಷಾನುಗಟ್ಟಲೆ ತೆಗೆದುಕೊಳ್ಳುವುದಿಲ್ಲ. ಯಾರೋ ಒಂದಿಬ್ಬರು ಕೂಡಿಕೊಂಡು ಬಂದು ಕಾರ್ಯ ಕ್ರಮಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ಗಡಸು ಧ್ವನಿಯಲ್ಲಿ ಅಶ್ವಥ್ ನಾರಾಯಣ ಮಾತನಾಡುತ್ತಿರುವಾಗಲೇ ಮೈಕ್ ಬಳಿಗೆ ಡಿಕೆ ಸುರೇಶ್ ಬಂದು ಹರಿಹಾಯ್ದರು. ಈ ವೇಳೆ ಪರಿಸ್ಥಿತಿ ಕೈ-ಕೈ ಮಿಲಾಯಿಸುವ ಹಂತ ಕೂಡ ತಲುಪಿತು.