ರಾಮನಗರ:ಜಿಲ್ಲೆಯ ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಇಂದು ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ತಂದೆ- ತಾಯಿ ಮತ್ತು ಮತ್ತೊಂದು ಮಗು ಗಾಯಗೊಂಡಿದೆ.
ಮಾಗಡಿ ತಾಲೂಕು ತೊರೆಪಾಳ್ಳ ಗ್ರಾಮದ ರೇಣುಕಯ್ಯ, ಶಿಲ್ಪ ದಂಪತಿ ತಮ್ಮ ಮಕ್ಕಳಾದ 4 ವರ್ಷದ ಚಂದನ, ಒಂದು ವರ್ಷದ ಕೃತಿಕಾರೊಂದಿಗೆ ಬೈಕ್‌ನಲ್ಲಿ ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟಕ್ಕೆ ದೇವರ ದರ್ಶನಕ್ಕಾಗಿ ತೆರಳುತ್ತಿದ್ದರು. ರಾಮನಗರ-ಕನಕಪುರ ರಸ್ತೆಯ ಗೌಡಯ್ಯನದೊಡ್ಡಿ ಗ್ರಾಮದ ಕೆರೆ ಏರಿ ರಸ್ತೆಯಲ್ಲಿ ಕನಕಪುರ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆ ಗುಂಡಿ ತಪ್ಪಿಸುವ ಸಲುವಾಗಿ ಬಲಭಾಗಕ್ಕೆ ಚಲಿಸಿದೆ. ಈ ವೇಳೆ ಬೈಕ್ ಮುಂದೆ ಚಲಿಸುತ್ತಿದ್ದ ಆಟೋ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ಆಯತಪ್ಪಿದ ಬೈಕ್ ರಸ್ತೆಗೆ ಬಿದ್ದಿದ್ದು, ಬೈಕ್‌ನ ಮುಂಭಾಗ ಕುಳಿತಿದ್ದ ನಾಲ್ಕು ವರ್ಷದ ಚಂದನ ಮೇಲೆ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.