ರಾಮನಗರ : ಈ ಬಾರಿಯೂ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆಗೆ ಮುಂದಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಚುನಾವಣೆ ಕುರಿತು ಇಂದು ರಾಮನಗರದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಈಗಾಗಲೇ ಕೆಪಿಸಿಸಿ ಅಧ್ಯಕ್ಷರು, ಸಿಎಲ್ಪಿ ನಾಯಕರು ಅಭ್ಯರ್ಥಿಗಳ ಹೆಸರು ಕಳುಹಿಸಿದ್ದು ಮೂರು ದಿನಗಳಲ್ಲಿ ಚನ್ನಪಟ್ಟಣ ಅಭ್ಯರ್ಥಿಯ ಘೋಷಣೆಯಾಗುತ್ತದೆ. ಚನ್ನಪಟ್ಟಣಕ್ಕೆ ಅಚ್ಚರಿಯ ಅಭ್ಯರ್ಥಿಯೇನೂ ಘೋಷಣೆಯಾಗಲ್ಲ. ರಾಮನಗರ ಜಿಲ್ಲೆಯವರೇ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷರಿಗೆ 224 ಕ್ಷೇತ್ರಗಳ ಜವಾಬ್ದಾರಿ ಇರುವುದರಿಂದ ನನ್ನ ಲೋಕಸಭಾ ಕ್ಷೇತ್ರದ 8 ಕ್ಷೇತ್ರದಲ್ಲಿ ನಾನು ಗಮನ ಹರಿಸಿದ್ದೇನೆ ಎಂದು ಹೇಳಿದರು.
ಸಚಿವ ಮುನಿರತ್ನ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಅವರಿಗೆ ಏನಾಗಿದೆಯೋ ಗೊತ್ತಿಲ್ಲ, ಭ್ರಮೆಯಲ್ಲಿರಬೇಕು. ನಾನೇಕೆ ಅವರನ್ನು ಟಾರ್ಗೆಟ್ ಮಾಡಲಿ. ನಾನು ಎಲ್ಲೆಡೆ ಕೆಲಸ ಮಾಡುತ್ತಿದ್ದೇನೆ, ಅದು ಅವರಿಗೆ ಕಾಣುತ್ತಿಲ್ಲ ಎಂದರು. ರಾಜ್ಯ ರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗಮನ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯ ರಾಜಕಾರಣಕ್ಕೆ ಬರಬಾರದು ಅಂತೇನೂ ಇಲ್ಲ. ಕೆಪಿಸಿಸಿ ಅಧ್ಯಕ್ಷರು ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ. ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇವೆ ಎಂದು ತಿಳಿಸಿದರು.
ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದು ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಚಾರ ನಡೆಸಬೇಕಿದೆ. ಕಾಂಗ್ರೆಸ್ ಈಗಾಗಲೇ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಲಿಷ್ಠ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಮನಗರ ವಿಧಾನಸಭಾ ಕ್ಷೇತ್ರ ಈ ಹಿಂದಿನಿಂದಲೂ ಜೆಡಿಎಸ್ ಭದ್ರಕೋಟೆ. ಈ ಕ್ಷೇತ್ರ ಹಲವು ವರ್ಷಗಳಿಂದ ಕಾಂಗ್ರೆಸ್ ಶಾಸಕರನ್ನು ನೋಡಿಲ್ಲ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.