ರಾಮನಗರ:ಸಚಿವ ಸಂಪುಟ ವಿಸ್ತರಣೆ ಆಗುವ ಮುನ್ಸೂಚನೆ ಸಿಗುತ್ತಿರುವ ನಡುವೆ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹಳೆ ಮೈಸೂರು ಪ್ರಾಂತ್ಯ ಜಿಲ್ಲೆಗಳು ಸೇರಿದಂತೆ ಒಕ್ಕಲಿಗ ಮತಬ್ಯಾಂಕ್ ಸೆಳೆಯಲು ಆ ಸಮುದಾಯದ ನಾಯಕರಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರು ಕೂಡ ಮುಂಚೂಣಿಯಲ್ಲಿದೆ.
ಇದೇ ತಿಂಗಳ ಏ.10ರ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ ಎಂದು ರಾಜ್ಯದ ಬಹುತೇಕ ಬಿಜೆಪಿ ನಾಯಕರು ಕೇಂದ್ರದ ವರಿಷ್ಠರ ಮನೆಗಳಿಗೆ ಹೋಗುತ್ತಿದ್ದಾರೆ. ಈಗಾಗಲೇ ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಕುಳಿತು ಲಾಬಿ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪಕ್ಷ ಬಲವರ್ಧನೆಗೆ ಸಚಿವ ಸಂಪುಟ ವಿಸ್ತರಣೆ:ಇನ್ನೊಂದೆಡೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಕೇವಲ 12 ತಿಂಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಹೊಸಬರಿಗೆ ಮಣೆ ಹಾಕಿ ಸಂಪುಟ ಪುನರ್ ರಚನೆ ಮಾಡಿದರೆ ಮುಂದಿನ ಚುನಾವಣೆಯನ್ನು ತಮ್ಮ ನೇತೃತ್ವದಲ್ಲೇ ನಡೆಸಬಹುದೆಂಬ ಇರಾದೆ ವರಿಷ್ಟರಿಗಿದೆ. ಅದರಲ್ಲೂ ಯುವ ಶಾಸಕರಿಗೆ ಸಚಿವ ಸ್ಥಾನ ನೀಡಿ ಅವರಿಂದ ಪಕ್ಷ ಸಂಘಟನೆ ಜೊತೆಗೆ ದಕ್ಷ ಆಡಳಿತ ಮಾಡುವ ಗುರಿ ಕೇಂದ್ರ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ದೆಹಲಿ ಯಾತ್ರೆ ಫಲಪ್ರದ: ಸಿಎಂ ಬೊಮ್ಮಾಯಿ
ಸಿಪಿವೈಗೆ ಒಲಿಯಲಿದೆಯೇ ಮಂತ್ರಿ ಭಾಗ್ಯ?: ಮತ್ತೊಂದೆಡೆ ಹಳೆ ಮೈಸೂರು ಪ್ರಾಂತ್ಯದ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಬಹಳ ಕಡಿಮೆ ಇದೆ. ಈ ಭಾಗದಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದವರು ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿ, ಈ ಭಾಗದಲ್ಲಿ ಹೆಚ್ಚು ಪಕ್ಷ ಸಂಘಟನೆ ಮಾಡುವ ಇರಾದೆ ಕೇಂದ್ರ ನಾಯಕರಿಗಿದೆ.
ಇದಲ್ಲದೆ ಈ ಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರ ಪ್ರಾಬಲ್ಯ ಹೆಚ್ಚಿದೆ. ಈ ಇಬ್ಬರು ನಾಯಕರನ್ನ ಎದುರಿಸಿ ಬಿಜೆಪಿ ಪಕ್ಷ ಸಂಘಟನೆ ಮಾಡುವ ನಾಯಕರೆಂದ್ರೆ ಅದು ಸಿಪಿವೈ ಎಂದು ಈಗಾಗಲೇ ಕೇಂದ್ರದ ನಾಯಕರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಭಾರಿ ಸಚಿವ ಸಂಪುಟದಲ್ಲಿ ಸಿಪಿವೈಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಬಹುದು.
ಸಿಪಿವೈಗೆ ಬಿಜೆಪಿ ಹೈಕಮಾಂಡ್ ಒಲವು: ಈ ನಡುವೆ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಹೆಚ್ಚು ಒಲವು ತೋರಿಸುತ್ತಿದೆ ಎನ್ನಲಾಗಿದೆ. ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಬೇಕಾದ್ರೆ ಈ ಭಾಗದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಇದಲ್ಲದೆ ಈ ಭಾಗದಲ್ಲಿ ಪ್ರಬಲ ಇಬ್ಬರು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನ ಎದುರಿಸಬೇಕಾದ್ರೆ ಸಿಪಿವೈ ರವರಿಗೆ ಸಚಿವ ಸ್ಥಾನ ನೀಡುವ ಇರಾದೆ ಇದೆ ಎಂದು ತಿಳಿದು ಬಂದಿದೆ.