ಕರ್ನಾಟಕ

karnataka

ETV Bharat / state

ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ಈ ಘಟನೆಯಿಂದ ನೋವಾಗಿದೆ ಎಂದ ಹೆಚ್​ಡಿಕೆ

ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು..

By

Published : Jan 28, 2022, 3:58 PM IST

Updated : Jan 28, 2022, 4:31 PM IST

ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ

ರಾಮನಗರ:ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳ‌ ಆತ್ಮಹತ್ಯೆ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್​ಡಿಕೆ, ಯಾವುದೇ ಕುಟುಂಬದಲ್ಲಿ ಇಂತಹ ಘಟನೆ ನಡೆದಾಗ ಈ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಈ ಪ್ರಕರಣದಿಂದ ನಮಗೆ ನೋವಾಗಿದೆ ಎಂದಿದ್ದಾರೆ.

ಆತ್ಮಹತ್ಯೆ ಎಂಬುದು ಯಾವುದೇ ಕುಟುಂಬದಲ್ಲಿ ಆಗಬಾರದು. ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆ ಆಗಾತಕಾರಿ ವಿಷಯವಾಗಿದೆ. ಯಡಿಯೂರಪ್ಪನವರು ಮನೆಯವರ ಜೊತೆ ಆತ್ಮೀಯ ಹಾಗೂ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದರು.

ಇಂತಹ ಒಂದು ದುಃಖದ ಸಂದರ್ಭದಲ್ಲಿ ಆ ನೋವನ್ನು ಭರಿಸುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿಕೆ‌ ಹೇಳಿದ್ದಾರೆ.

ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ

ಮಲಗಿದ್ದವರೆಲ್ಲಾ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ :ರಾಮನಗರ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಚನ್ನಪಟ್ಟದಲ್ಲಿ ಇಂದು ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಏನನ್ನೂ ಮಾಡದ ಕಾಂಗ್ರೆಸ್ ನಾಯಕರಾದ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅವರನ್ನಾಗಲಿ ಅಥವಾ ಮತ್ತೆ ಯಾರನ್ನೇ ಆಗಲಿ ಟಾರ್ಗೆಟ್ ಮಾಡ್ತಿಲ್ಲ. ನನಗೂ ಅವರಿಗೂ ಸಂಬಂಧ ಇಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ, ನನ್ನನ್ನ ಅವರು ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಪುಟ್ಟ ಮಗುವಿದ್ರೂ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ನನ್ನನ್ನು ಇಲ್ಲಿಂದ ಖಾಲಿ ಮಾಡಿಸುತ್ತಾರಂತೆ :ಅವರು ಕುಮಾರಸ್ವಾಮಿಯನ್ನು ರಾಮನಗರದಿಂದ ಖಾಲಿ ಮಾಡಿಸಬೇಕಂತೆ. ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ರಾಮನಗರ ಜಿಲ್ಲೆಗೂ ನನಗೂ ಇರುವ ಸಂಬಂಧ ಸಾವಿರಾರು ಬಾರಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ಹೆಚ್‌ಡಿಕೆ ತಿರುಗೇಟು ನೀಡಿದರು.

ಅವರು ಹಣ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನು ಬಗ್ಗು ಬಡಿಯಲು ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಈ ಜಿಲ್ಲೆಯ ಜನರಿಗೂ ದೇವೇಗೌಡರ ಕುಟುಂಬಕ್ಕೆ ಪೂರ್ವ ಜನ್ಮದ ಸಂಬಂಧ ಇದೆ. ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲುಗನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡ್ತೇವೆ ಎಂದಿದ್ದಾರೆ ಅವರು.

ಮಾಜಿ ಸಿಎಂ ಹೆಚ್​​.ಡಿ. ಕುಮಾರಸ್ವಾಮಿ

ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಂಹಕಾರದ ಮಾತಲ್ಲ. ಅವರ ನಡವಳಿಕೆಗಳನ್ನ ಅರ್ಥ ಮಾಡಿಕೊಂಡಿದ್ದೇನೆ. ಈ ಜಿಲ್ಲೆಯ ಜನರನ್ನು ಗೆಲ್ಲೋದು ಅಷ್ಟು ಸುಲಭವಲ್ಲ. ಪ್ರೀತಿ, ವಿಶ್ವಾಸ, ದುಡಿಮೆ ಇದ್ದರಷ್ಟೇ ಜಿಲ್ಲೆಯಲ್ಲಿ ಉಳಿಯಲು ಸಾಧ್ಯ. ಹಣಕ್ಕೆ ಇಲ್ಲಿ ಬೆಲೆ ಸಿಗಲ್ಲ ಎಂದರು.

ಪುಟ್ಟರಾಜು & ಸಿದ್ದರಾಮಯ್ಯ ಭೇಟಿ ಬಗ್ಗೆ ಗೊತ್ತಿಲ್ಲ:ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನು? ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು.

ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದು ಅವರು ನೇರವಾಗಿ ಹೇಳಿದರು. ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗುತ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್​ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದು ಹೆಚ್​ಡಿಕೆ ತಿಳಿಸಿದರು.

ಸಿಎಂ ಇಬ್ರಾಹಿಂ ನಮ್ಮವರು :ಸಿ ಎಂ ಇಬ್ರಾಹಿಂ ಅವರು ನಮಗೆ ಹಳಬರು, ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ, ನಾನು ಜೆಡಿಎಸ್ ಸೇರ್ತೇನೆಂದು ಸ್ವತಃ ಅವರೇ ಹೇಳಿದ್ದಾರೆ. ಅವರಿಗೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ಜನ ತೀರ್ಮಾನ ಮಾಡುತ್ತಾರೆ:ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ. ಆ ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ. ಅವರು ಈಗಾಗಲೇ ದೊಡ್ಡ ದೊಡ್ಡ ಜಾಹೀರಾತುಗಳ ಮೂಲಕ ಅವರ ಪ್ರಚಾರ ಪಡೆಯುತ್ತಿದ್ದಾರೆ. ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ ಯಾರೂ ನೋಡುತ್ತಿಲ್ಲ. ಈ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ ಎಂದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

2023ಕ್ಕೆ ಯಾರ ಜೊತೆಗೂ ಮೈತ್ರಿ ಇಲ್ಲ. 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇದೆ. ಕೋವಿಡ್ ವಾತಾವರಣ ಮುಗಿದ ನಂತರ ಮುಂದಿನ ಒಂದು ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಜೆಡಿಎಸ್ ಮುಗಿದೇ ಹೋಯ್ತು ಅನ್ನುವರಿಗೆ ಜನ ಉತ್ತರ ಕೊಡುತ್ತಾರೆ ಕಾದು ನೋಡಿ ಎಂದರು.

Last Updated : Jan 28, 2022, 4:31 PM IST

ABOUT THE AUTHOR

...view details