ರಾಮನಗರ: ಜೆಡಿಎಸ್ ಭದ್ರಕೋಟೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ಅದ್ದೂರಿಯಾಗಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡು, ದಳಪತಿಗಳ ಅಖಾಡದಲ್ಲಿ ಕಮಲ ಕಲಿಗಳು ಶಕ್ತಿ ಪ್ರದರ್ಶನ ತೋರಿದರು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ದೊಡ್ಡಮಳೂರು ಗ್ರಾಮದ ಅಪ್ರಮೇಯ ದೇವಾಲಯದಿಂದ ಯಾತ್ರೆ ಆರಂಭಗೊಂಡು, ನಗರದಾದ್ಯಂತ ಬೃಹತ್ ಬೈಕ್ ರ‍್ಯಾಲಿ ಮೂಲಕ ಪ್ರದರ್ಶನ ಹಾಕಲಾಯಿತು.
ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿ ಎಂ ಸದಾನಂದಗೌಡ, ಸಚಿವ ಅಶ್ವಥ್ ನಾರಾಯಣ್, ಆರ್.ಅಶೋಕ್, ಎಸ್ ಟಿ ಸೋಮಶೇಖರ್, ಆರ್.ಅಶೋಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಚನ್ನಪಟ್ಟಣ, ರಾಮನಗರದಲ್ಲಿ ಯಾತ್ರೆ ನಡೆಸಿ ಬಿಡದಿಯಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದರು. ಚನ್ನಪಟ್ಟಣದಿಂದ ಪ್ರಾರಂಭವಾದ ವಿಜಯಸಂಕಲ್ಪಯಾತ್ರೆಯು ರಸ್ತೆಯುದ್ದಕ್ಕೂ ಕೇಸರಿಮಯ, ಪ್ಲೆಕ್ಸ್ ಗಳ ಕಲರವ ಆರ್ಭಟ ಜೋರಾಗಿತ್ತು. ರಸ್ತೆಯ ಎರಡು ಬದಿ ಬಿಜೆಪಿ ಕಮಲ ಬಾವುಟಗಳು ರಾರಾಜಿಸುತ್ತಿದ್ದವು.
ವಿಜಯ ಸಂಕಲ್ಪ ಯಾತ್ರೆ: ಈ ಸಂದರ್ಭದಲ್ಲಿ ಸಚಿವ ಆರ್ ಅಶೋಕ್ ಮಾತನಾಡಿ, ನಿನ್ನೆ ಅಮಿತ್ ಶಾ ಅವರು ವಿಜಯ ಸಂಕಲ್ಪ ಯಾತ್ರೆ ಉದ್ಘಾಟನೆ ಮಾಡಿದ್ದಾರೆ. ಇಂದು ರಾಮನಗರ, ಚನ್ನಪಟ್ಟಣ, ಮಾಗಡಿಯಲ್ಲಿ ಯಾತ್ರೆ ನಡೆಯುತ್ತಿದೆ. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಮತ್ತೆ ಬರಲಿದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ: ನಾವು ನಾಲ್ಕು ತಂಡಗಳಾಗಿ ರಾಜ್ಯಾದ್ಯಂತ ಯಾತ್ರೆ ನಡೆಸುತ್ತಿದ್ದೇವೆ. ಒಟ್ಟು 15 ದಿನಗಳ ಕಾಲ 224 ಕ್ಷೇತ್ರಗಳನ್ನು ಭೇಟಿ ಮಾಡಲಿದ್ದೇವೆ. ಈ ಬಾರಿ ಮತ್ತೆ ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನಿಸಿದ್ದೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಮನೆಗೆ ಕಳುಹಿಸಲು ಪ್ಲಾನ್ ಮಾಡಿದ್ದೇವೆ. ಹಾಗೆಯೇ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ನ ಎ ಟೀಮ್ ಬಿ ಟೀಮ್ ಅನ್ನು ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ: ಡಬಲ್ ಇಂಜಿನ್ ಸರ್ಕಾರ ಇದ್ದರೆ ಅಭಿವೃದ್ಧಿ ಆಗುತ್ತದೆ. ದೇಶದ ಪೂರ್ವ ರಾಜ್ಯಗಳಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಬಾವುಟ ಹಾರುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಫೈಟ್ ಮಾಡಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ. ಹಾಗೆಯೇ ಹಳೆ ಮೈಸೂರು ಭಾಗದಲ್ಲಿ ಮತ್ತಷ್ಟು ಜನರು ಬಿಜೆಪಿಗೆ ಸೇರುವ ಸಾಧ್ಯತೆ ಇದ್ದು, ಈ ಭಾಗದಲ್ಲಿ ಮತ್ತಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅಭಿಪ್ರಾಯ ತಿಳಿಸಿದರು.
ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು:ಇನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ವಿಧಾನಸೌದದಲ್ಲಿ ಆಡಳಿತ ಮಾಡಿ ಅಂದ್ರೆ ಹೋಟೆಲ್ ನಲ್ಲಿ ಕುಳಿತು ಅಧಿಕಾರ ನಡೆಸಿದ್ದರು.
ಲೋಕಾಯುಕ್ತ ದಾಳಿ:ಮಾಡಾಳ್ ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರು ಮಾತಾಡ್ತಾ ಇದ್ದಾರೆ. ನಮ್ಮ ಪಕ್ಷ ತುಂಬಾ ಪಾರದರ್ಶಕತೆ ಇದೆ. ನಮ್ಮ ಪಕ್ಷದ ಶಾಸಕರ ಮೇಲೆ ದಾಳಿ ನಡೆದರೂ, ಸಂಪೂರ್ಣ ತನಿಖೆ ನಡೆಯಲಿದೆ ಎಂದು ತಿಳಿಸಿದರು. ಇದಲ್ಲದೇ ಡಿಕೆ ಹಾಗೂ ಹೆಚ್ ಡಿಕೆ ಜೋಡೆತ್ತು ರೀತಿ ಇದ್ದರೂ ಇಬ್ಬರೂ ಕೈ ಎತ್ತಿಕೊಂಡಿರುವುದನ್ನು ಎಲ್ಲರೂ ನೋಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಅನುಭವ ಇತ್ತೇನೋ ಗೊತ್ತಿಲ್ಲ. ಇವಾಗ ನೋಡಿದರೆ ಅವರಿಬ್ಬರೆ ಕಚ್ಚಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಬೊಮ್ಮಾಯಿ ನೇತೃತ್ವ:ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ರಾಜ್ಯದಲ್ಲಿ ಕಿಚಡಿ ಸರ್ಕಾರ ಬೇಡ. ಕೇಂದ್ರದ ರೀತಿ ಸ್ಥಿರವಾದ ಸರ್ಕಾರ ನಮ್ಮ ರಾಜ್ಯದಲ್ಲೂ ಬರಬೇಕು ಎಂದು ಪ್ರಯತ್ನ ಪಡುತ್ತಿದ್ದೇವೆ. ಆರು ತಿಂಗಳಿಗೊಂದು ಸರ್ಕಾರ ಬೇಡ ಅನ್ನೋದು ನಮ್ಮೆಲ್ಲರ ಅಭಿಪ್ರಾಯ ಎಂದರು.