ರಾಮನಗರ:ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹೊಸ ರೀತಿಯ ಬೆಳವಣಿಗೆ ನಡೆಯುತ್ತಿವೆ. ವಿವಿಧ ಮಠಗಳ ಸ್ವಾಮೀಜಿಗಳು ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಬೇಕು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಸ್ವಾಮೀಜಿಗಳ ಭಾವನೆಗಳಿಗೆ ಬಿಜೆಪಿ ನಾಯಕರು ಯಾವ ರೀತಿ ಸ್ಪಂದನೆ ಮಾಡುತ್ತಾರೆ ಎಂಬುದರ ಕುರಿತು ಅವರೇ ಹೇಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಠಾಧೀಶರ ಭಾವನೆಗಳಿಗೆ ಬಿಜೆಪಿಗರೇ ಪ್ರತಿಕ್ರಿಯೆ ನೀಡಬೇಕು: ಹೆಚ್.ಡಿ.ಕುಮಾರಸ್ವಾಮಿ
ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವ ಬೆಳವಣಿಗೆಗಳು ನಡೆಯುತ್ತಿವೆ. ವಿವಿಧ ಮಠಾಧೀಶರು ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪನವರು ಮುಂದುವರೆಯಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸ್ವಾಮೀಜಿಗಳ ಭಾವನೆಗಳಿಗೆ ಬಿಜೆಪಿಗರೇ ಉತ್ತರ ನೀಡಬೇಕು ಎಂದು ರಾಜಕೀಯದಲ್ಲಿ ಸ್ವಾಮೀಜಿಗಳ ಪಾತ್ರದ ಕುರಿತು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಹೆಚ್‌ಡಿಕೆ, ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬೆಳವಣಿಗೆ ನಡೆಯುತ್ತಿವೆ. ಮೈತ್ರಿ ಸರ್ಕಾರ ಕೆಡವಿ ಕಷ್ಟಪಟ್ಟು ಬಿಜೆಪಿ ಸರ್ಕಾರ ತಂದಿದ್ದಾರೆ. ಇದೀಗ ರಾಜ್ಯದಲ್ಲಿ ಕೋವಿಡ್, ನೆರೆ ಸಂಕಷ್ಟಗಳಿವೆ. ಇಂತಹ ಸಮಯದಲ್ಲಿ ಜನರ ಜೀವದ ಬಗ್ಗೆ ಚೆಲ್ಲಾಟ ಆಡಬೇಡಿ. ರಾಷ್ಟ್ರೀಯ ಪಕ್ಷಗಳು ಜಾತಿ ಆಧಾರದ ಮೇಲೆ ಮತಗಳನ್ನು ಪಡೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಎಲ್ಲಾ ಧರ್ಮದವರನ್ನ ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತದೆ. ಬಿಎಸ್ವೈ ಅವರ 2 ವರ್ಷದ ಸಾಧನೆ ಬಗ್ಗೆ ಹೇಳಲು ನಾನು ವಿಶ್ಲೇಷಕ ಅಲ್ಲ ಎಂದು ಹೆಚ್‌ಡಿಕೆ ತಿಳಿಸಿದರು.