ಮಾಜಿ ಸಚಿವ ಸಿ ಪಿ ಯೋಗೇಶ್ವರ್ ರಾಮನಗರ : ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬಹಳ ವಿರೋಧ ಇದ್ದ ಕ್ಷೇತ್ರ. ಚನ್ನಪಟ್ಟಣ ನಾವು ಕುಮಾರಸ್ವಾಮಿಯನ್ನು ನೇರಾ ನೇರವಾಗಿ ಪರಸ್ಪರ ವಿರೋಧವಾಗಿ ರಾಜಕೀಯ ಮಾಡಿಕೊಂಡು ಬಂದಿದ್ದೆವು. ಹೊಂದಾಣಿಕೆ ಅನ್ನೋದು ತಾಳ್ಮೆಯಿಂದ ಪರಸ್ಪರ ಒಂದಾಗಿ ಎಲ್ಲರ ಮನಸ್ಸನ್ನು ಒಗ್ಗೂಡಿಸುವುದು ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ ಚನ್ನಪಟ್ಟಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಕ್ಷೇತ್ರದ ಹಾಗೂ ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ಕರೆದು ಚರ್ಚಿಸಲಾಗಿದ್ದು, ಸಭೆಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ತೆಗೆದುಕೊಂಡಿರುವ ನಿರ್ಧಾರವನ್ನು ತಿಳಿಸಲಾಗುವುದು. ಮೈತ್ರಿಯ ಅನಿವಾರ್ಯತೆ ಏನು ಎಂಬುದರ ಕುರಿತು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಇದಲ್ಲದೆ ಬೂತ್ ಮಟ್ಟದಲ್ಲಿ ಎರಡು ಪಕ್ಷದವರನ್ನು ಒಗ್ಗೂಡಿಸಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಹಿಂದೆ ಜೆಡಿಎಸ್ ಜೊತೆ ನೇರಾನೇರ ಫೈಟ್ ಇತ್ತು. ಹೀಗಾಗಿ ಮೈತ್ರಿಯನ್ನು ಕಾರ್ಯಕರ್ತರು ಒಪ್ಪಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಾತನಾಡಿದ ಯೋಗೇಶ್ವರ್, ನೂರಕ್ಕೆ ನೂರು ಪರ್ಸೆಂಟ್ ಕಾರ್ಯಕರ್ತರು ಒಪ್ಪಿದ್ದಾರೆ. ನಮ್ಮ ಹಾಗೂ ಜೆಡಿಎಸ್ ಕಿತ್ತಾಟದ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ ಎಂಎಲ್ಎ ಚುನಾವಣೆಯಲ್ಲೂ ಕಾಂಗ್ರೆಸ್ಗೆ ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಆ ತಪ್ಪು ಆಗಬಾರದು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕಾಗಿದೆ. ಹೀಗಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಸೈದ್ಧಾಂತಿಕವಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡ್ತಿವೆ. ಹಾಗೆಯೇ ಮೈತ್ರಿ ನಂತರ ಮಾಜಿ ಸಿಎಂ ಹೆಚ್ಡಿಕೆ ಹಾಗೂ ಸಿಪಿವೈ ಭೇಟಿ ಮಾಡಿದ್ದಾರೆಂಬ ವಿಚಾರವಾಗಿ ಮಾತನಾಡಿ, ಮೈತ್ರಿ ನಂತರ ವೈಯಕ್ತಿಕವಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ, ಒಂದು ಸಲ ಫೋನ್ನಲ್ಲಿ ಮಾತಾಡಿದ್ದೇನೆ ಎಂದು ತಿಳಿಸಿದರು.
ಇಂದು ಚನ್ನಪಟ್ಟಣ ತಾಲೂಕು ಬಿಜೆಪಿ ಮುಖಂಡರ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು. ಎರಡು ತಿಂಗಳ ನಂತರ ಎರಡು ಪಕ್ಷದ ನಾಯಕರು, ಮುಖಂಡರು ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ಯಾರೇ ಅಭ್ಯರ್ಥಿಯಾದ್ರು ಬೆಂಬಲ -ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸ್ಪರ್ಧೆ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಯಾವ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಬೇಕು ಎಂದು ಎರಡು ಪಕ್ಷದ ನಾಯಕರು ಚರ್ಚೆ ಮಾಡುತ್ತಾರೆ. ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಕೆಲಸವಾಗಿದೆ. ಸಂಸದ ಡಿ ಕೆ ಸುರೇಶ್ ದರ್ಪದಿಂದ ಜನ ಬೇಸತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ಗೆ ತನ್ನದೇ ಆದ ಮತಗಳಿವೆ. ಎರಡೂ ಪಕ್ಷದ ಅಭ್ಯರ್ಥಿಗಳು ಒಟ್ಟಾಗಿ ಕೆಲಸ ಮಾಡಿದ್ರೆ ಚುನಾವಣೆ ಒಂದು ಸೈಡ್ ಆಗುತ್ತೆ. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವ ಎಸ್ಟಿ ಸೋಮಶೇಖರ್ ಬಿಜೆಪಿಯಲ್ಲಿ ಎಲ್ಲ ಅಧಿಕಾರ ಅನುಭವಿಸಿದ್ರು - ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಗೆ ಶಾಸಕ ಎಸ್ ಟಿ ಸೋಮಶೇಖರ್ ವಿರೋಧ ವಿಚಾರವಾಗಿ ಮಾತನಾಡಿದ ಯೋಗೇಶ್ವರ್ ಅವರು ಎಸ್ ಟಿ ಸೋಮಶೇಖರ್ ಬಿಜೆಪಿಯಲ್ಲಿ ದೊಡ್ಡ ಫಲಾನುಭವಿಯಾಗಿದ್ದಾರೆ. ಬಿಜೆಪಿಗೆ ಬಂದ ಮೇಲೆ ಬಿಡಿಎ ಅಧ್ಯಕ್ಷ ಆದ್ರು, ಮಂತ್ರಿ ಆಗಿ ಪ್ರಬಲ ಖಾತೆ ಪಡೆದುಕೊಂಡು ಅಧಿಕಾರ ಅನುಭವಿಸಿದ್ದರು. ಇವತ್ತು ಅಧಿಕಾರ ಇಲ್ಲ ಅಂತ ಹೀಗೆ ಮಾತನಾಡುತ್ತಾರೆ. ಡಿಕೆಶಿ ಜೊತೆಗಿನ ಸಂಬಂಧ ಇಟ್ಕೊಂಡು ನಮ್ಮ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮೈತ್ರಿ ವಿಚಾರ ಚರ್ಚೆಗೂ ಮೊದಲೂ ಟೀಕೆ ಮಾಡ್ತಿದ್ರೂ, ಈಗಲೂ ಟೀಕೆ ಮಾಡ್ತಿದ್ದಾರೆ. ಬಹುಶಃ ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಟ್ರೆ ಮಾಜಿ ಶಾಸಕ ಆಗಬಹುದು, ಅದನ್ನು ಬಿಟ್ಟು ಇನ್ನೇನು ಆಗಲು ಸಾಧ್ಯವಿಲ್ಲ ಎಂದರು.
ಒಂದು ವೇಳೆ ಸೋಮಶೇಖರ್ ಹೊರಹೋಗುವ ತೀರ್ಮಾನ ಮಾಡಿದ್ರೆ ನಮ್ಮ ವಿರೋಧ ಇಲ್ಲ, ಸ್ವಾಗತಿಸುತ್ತೇವೆ. ಪದೇ ಪದೆ ಪಕ್ಷಕ್ಕೆ ಮುಜುಗರ ಮಾಡೋದು ನಮಗೂ ನೋವು ತರುತ್ತದೆ. ಅಧಿಕಾರ ಇದ್ದಾಗ ಅನುಭವಿಸಿ ಇಂದು ಪಕ್ಷದ ವಿರುದ್ಧ ಮಾತನಾಡೋದು ಶೋಭೆಯಲ್ಲ ಎಂದರು.
ಹಾಗೆಯೇ ಸಿ ಪಿ ಯೋಗೇಶ್ವರ್ ಕೂಡ ಕಾಂಗ್ರೆಸ್ಗೆ ಬರ್ತಾರೆ ಎಂಬ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಕುಚೋದ್ಯದ ಮಾತಾಗಿದೆ. ಈಗ ಅವರು ರಾಜಕೀಯವಾಗಿ ಕಣ್ಣು ಬಿಟ್ಟಿದ್ದಾರೆ. ಅವರಿಗೆ ಆ ಭಾವನೆ ಇರಬಹುದು. ನಾನು ಬಂದ್ರೆ ಪಾರ್ಲಿಮೆಂಟ್ ಇನ್ನೊಂದು ಬಾರಿ ಗೆಲ್ಲಬಹುದು ಅಂತ. ಆತರ ಆಗೋದಿಲ್ಲ. ಅವರು ಯಾರು ಅಂತ ನಾನು ಮಾತನಾಡಲಿ ಎಂದರು.
ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ- ಸಿಎಂ ಸಿದ್ದರಾಮಯ್ಯ ಅನಿರೀಕ್ಷಿತ ಭೇಟಿ