ರಾಮನಗರ : ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡಿಲ್ಲ. ಅಡ್ಡದಾರಿಯಲ್ಲಿ ಅಧಿಕಾರಕ್ಕೇರುವುದು ಆ ಪಕ್ಷದ ನಾಯಕರಿಗೆ ಕರಗತವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅನೈತಿಕವಾಗಿ ಸರ್ಕಾರ ರಚನೆ ಮಾಡುವುದೇ ಅವರ ಕಾಯಕ. ಬಿಜೆಪಿ ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡಿದ ಉದಾಹರಣೆ ಇಲ್ಲ. ಆ ಪಕ್ಷದ ನಾಯಕರಿಗೆ ಬದ್ಧತೆ ಇಲ್ಲ. ಆಪರೇಷನ್ ಕಮಲ ಮಾಡುವ ಕನಸು ಕಾಣುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ. ಜನತೆ ನಮಗೆ ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ. ಯಾವುದೇ ಆಪರೇಷನ್ ನಡೆಯಲ್ಲ. ನಮ್ಮ ಗ್ಯಾರಂಟಿಗಳಿಗೆ ಬೆದರಿ ಆ ಪಕ್ಷದ ಶಾಸಕರು ನಮ್ಮ ಪಕ್ಷದತ್ತ ಬರುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗರಿಗೆ ತಕ್ಕಪಾಠ ಕಲಿಸಿದರೂ ಆ ಪಕ್ಷದ ಮುಖಂಡರಿಗೆ ಬುದ್ದಿಬಂದಂತೆ ಕಾಣುತ್ತಿಲ್ಲ ಎಂದು ಛೇಡಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದೆಲ್ಲ ಜನತೆಗೆ ಸುಳ್ಳು ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದರು. ಅದೆಲ್ಲ ಆಶ್ವಾಸನೆಯಾಗಿಯೇ ಉಳಿದಿದೆ. ನಾವು ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಯಂತೆ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
ರಾಮನಗರ ಜಾನಪದ ಲೋಕಕ್ಕೆ ಭೇಟಿ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಚಿವ ಶಿವರಾಜ್ ತಂಗಡಗಿ ಅವರು ಮೊದಲ ಬಾರಿಗೆ ಭಾನುವಾರ ರಾಮನಗರದ ಜಾನಪದ ಲೋಕಕ್ಕೆ ಭೇಟಿ ನೀಡಿದರು. ಜಾನಪದ ಲೋಕ ವೀಕ್ಷಣೆಗೆ ಮೊದಲು ದಿವಂಗತ ಹೆಚ್. ಎಲ್ ನಾಗೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸುಮಾರು ಎರಡು ತಾಸು ಲೋಕಮಹಲ್, ಲೋಕಮಾತಾ ಮಂದಿರ, ಜಾನಪದ ಕಲಾಕೃತಿಗಳು, ಪೌರಾಣಿಕ ಹಾಗೂ ಮಹಾ ಕಾವ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.