ರಾಮನಗರ: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಇಂದು ಸಂಜೆ 5.30 ರಿಂದ ನಾಳೆ ಬೆಳಗ್ಗೆ 4 ಗಂಟೆ ವರೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈ ಪಾಸ್ ರಸ್ತೆಯನ್ನು ಬಂದ್ ಮಾಡಲಾಗುವುದು ಎಂದು ರಾಮನಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಯಂತೆ ರೆಸಾರ್ಟ್ ಗಳು, ಪಬ್, ರೆಸ್ಟೋರೆಂಟ್, ಬಾರ್ ಮಾಲೀಕರು ನಿಯಮಗಳನ್ನು ಪಾಲಿಸಬೇಕು. ಹೊಸ ವರ್ಷದ ಸಂಭ್ರಮದಲ್ಲಿ ಮದ್ಯ ಸೇವಿಸಿ ಹೆದ್ದಾರಿಯಲ್ಲಿ ವಾಹನ ಚಲಾಯಿಸುತ್ತಾರೆಂದು ಈ ಆದೇಶ ಹೊರಡಿಸಲಾಗಿದೆ. ಅತಿ ವೇಗವಾಗಿ ವಾಹನ ಚಲಾಯಿಸುವುದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಮದ್ಯ ಸೇವಿಸಿ ವಾಹನ ಚಲಾವಣೆ ತಡೆಯಲು ಕ್ರಮ: ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯಿಂದ, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಹೊಸದಾಗಿ ನಿರ್ಮಾಣವಾಗಿರುವ ಬೈ ಪಾಸ್ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ್ಯುಕೂಪವಾದ ಹೆದ್ದಾರಿ:ನೂತನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಅತಿ ವೇಗದಿಂದ ನಿತ್ಯ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸಿ, ಸಾವು ನೋವುಗಳು ಉಂಟಾಗುತ್ತಿವೆ. ಹೀಗಾಗಿ ಇದು ಅಪಾಯಕಾರಿ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಬಹು ಕೋಟಿ ವೆಚ್ಚದಲ್ಲಿ ದಶಪಥ ಹೆದ್ದಾರಿ ನಿರ್ಮಾಣಗೊಂಡಿದೆ. ಹೆದ್ದಾರಿ ಉದ್ಘಾಟನೆಗೂ ಮೊದಲೇ ಮೃತ್ಯುಕೂಪವಾಗಿ ಪರಿಣಮಿಸಿದ್ದು, ದಿನದಿಂದ ದಿನಕ್ಕೆ ಅಪಘಾತಗಳ ಹಾಗೂ ಮೃತಪಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.