ರಾಮನಗರ:ಬಮೂಲ್ ಉತ್ಸವ ಇದೇ ಫೆ.27ರಂದು ಚನ್ನಪಟ್ಟಣ ನಗರದ ಹೊರ ವಲಯದಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಶಿಷ್ಟಾಚಾರ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಆಹ್ವಾನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಒಕ್ಕೂಟದ ನಿರ್ದೇಶಕ ಎಚ್.ಸಿ. ಜಯಮುತ್ತು ತಿಳಿಸಿದ್ದಾರೆ.
ಬಮೂಲ್ ಉತ್ಸವದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿ ಬರುತ್ತಿರುವ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮದ ಆಹ್ವಾನಿತರ ಪಟ್ಟಿ ಮತ್ತು ಆಹ್ವಾನ ಪತ್ರಿಕೆಗೆ ಸಂಬಂಧಿಸಿದ ವಿಚಾರ ಸರ್ಕಾರದ ಶಿಷ್ಟಾಚಾರಕ್ಕೆ ಒಳಪಡುವುದಿಲ್ಲ. ಬಮೂಲ್ ಒಕ್ಕೂಟಕ್ಕೆ ಒಳಪಟ್ಟ ಯಾವುದೇ ಕ್ಷೇತ್ರದಲ್ಲೂ ಅದು ಹಿಂದಿನಿಂದ ಪಾಲನೆ ಆಗಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಆಹ್ವಾನ ನೀಡಲಾಗುತ್ತಿಲ್ಲ. ಹೈನೋದ್ಯಮಕ್ಕೆ ಸಹಕಾರ ನೀಡಿದವರನ್ನು ಆಹ್ವಾನಿಸಲಾಗಿದೆ ಎಂದರು. ಹಾಗೆಯೇ ಹೈನೋದ್ಯಮದ ಬೆಳವಣಿಗೆಗೆ ಕ್ಷೇತ್ರದ ಶಾಸಕರೂ ಆದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಲನಚಿತ್ರ ನಟ ಎಂಬ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ಅತಿಥಿ ಆಗಿದ್ದಾರೆ ಎಂದು ತಿಳಿಸಿದರು.
ಬಮೂಲ್ ಒಕ್ಕೂಟಕ್ಕೆ ಸತತ ಎರಡು ವರ್ಷದ ಪರಿಶ್ರಮದಿಂದ 20 ಎಕರೆ ಜಾಗದ ಮಂಜೂರಾತಿ ಪಡೆದುಕೊಳ್ಳಲಾಗಿತ್ತು. ಅಂದು ಇಲ್ಲ ಸಲ್ಲದ ಗೊಂದಲ ಮತ್ತು ಕುತಂತ್ರ ನಡೆಸಿದವರು ಯೋಗೇಶ್ವರ್ ಎಂದು ಬಮೂಲ್ ನಿರ್ದೇಶಕ ಜಯಮುತ್ತು ಆರೋಪಿಸಿದರು. ಬಮೂಲ್‍ಗೆ ಜಾಗ ದಕ್ಕದಂತೆ ಮಾಡಲು ಯೋಗೇಶ್ವರ್ ಅನಗತ್ಯ ಗೊಂದಲ ಸೃಷ್ಟಿಸಿದ್ದರು. ಕೆಲ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಮೂಲ್ಯವಾದ ಜಾಗ ಕೈತಪ್ಪಲು ಅವರು ಕಾರಣೀಭೂತರಾಗಿದ್ದಾರೆ ಎನ್ನುವ ಮೂಲಕ ಯೋಗೇಶ್ವರ್ ಅವರಿಗೆ ಆಹ್ವಾನ ನೀಡದ ತಮ್ಮ ಕ್ರಮವನ್ನು ಜಯಮುತ್ತು ಸಮರ್ಥನೆ ಮಾಡಿಕೊಂಡರು.