ರಾಮನಗರ:ಇ - ಖಾತೆ ಅಕ್ರಮ ಆರೋಪದ ಮೇಲೆ ಅಮಾನತುಗೊಂಡಿದ್ದ ಬಿಡದಿ ಹೋಬಳಿಯ ಬೈರಮಂಗಲ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದೆ.
ಈ ಹಿಂದೆ ಹಾರೋಹಳ್ಳಿ, ಬೈರಮಂಗಲ ಸೇರಿದಂತೆ ವಿವಿಧೆಡೆಯಲ್ಲಿ ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ಬೆಂಗಳೂರು ಸೈಬರ್ ಪೊಲೀಸರು ಕೆಲವು ತಿಂಗಳ ಹಿಂದೆ ಬೈರಮಂಗಲ ಗ್ರಾ.ಪಂ. ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದರು. ಈ ಸಂದರ್ಭ ರವಿ ಸ್ಥಳದಿಂದ ನಾಪತ್ತೆ ಆಗಿದ್ದರು. ಬಳಿಕ ಇವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ರವಿ ಅವರನ್ನು ಜಿ.ಪಂ. ಸಿಇಒ ಇಕ್ರಂ ಅವರು ಸೇವೆಯಿಂದ ಅಮಾನತುಗೊಳಿಸಿದ್ದರು.
2021ರ ಸೆ.17ರಿಂದ 21ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಒ ಅವರ ಇ-ಸ್ವತ್ತು ಲಾಗಿನ್ ಐಡಿಯನ್ನು ಹ್ಯಾಕ್ ಮಾಡಿ 36 ಕಂದಾಯ ಸೈಟುಗಳಿಗೆ ಇ - ಖಾತಾ ವಿತರಿಸಲಾಗಿತ್ತು. ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ, ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಸೈಬರ್ ಪೊಲೀಸರು, ರಾಮನಗರ ಜಿಲ್ಲೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಭರತ್ ನನ್ನು ಬಂಧಿಸಿದ್ದರು. ಇತ್ತ ಬಿಡದಿ ಹೋಬಳಿ ಬೈರಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕುಳಿತು ಲಾಗಿನ್ ಆಗಿ ಅಕ್ರಮವಾಗಿ ಇ - ಖಾತಾ ಮಾಡಿಕೊಂಡಿದ್ದ ಕಿಂಗ್ ಪಿನ್ ರವಿಕುಮಾರ್, ಕೆಲಸಕ್ಕೆ ರಜೆ ಸಲ್ಲಿಸಿ ತಲೆಮರೆಸಿಕೊಂಡಿದ್ದ .ಈ ಸಂಬಂಧ ಪೊಲೀಸರು ಬಂಧನಕ್ಕೆ ಬಲೆಬೀಸಿದ್ದರು.
ಓದಿ :ಮಂಗಳೂರಿನಲ್ಲಿ ಆರಂಭವಾಗಲಿದೆ ದೇಶದ 2ನೇ ಆಯುಷ್ ಸ್ಪೋರ್ಟ್ ಮೆಡಿಕಲ್ ಸೆಂಟರ್