ಕರ್ನಾಟಕ

karnataka

ETV Bharat / state

ಬಂಜೆಯರ ಬಾಳಲ್ಲಿ ಬೆಳಕಾದ ನಾಟಿ ವೈದ್ಯೆಗೆ '2021ರ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್' - KT Lakshmamma get Bhagavan Buddha National Award- 2021

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಡಮಾಡುವ '2021ರ ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್'​ಗೆ ಭಾಜನರಾಗುವ ಮೂಲಕ ಸಾಮಾಜಿಕ ಕಾರ್ಯಕರ್ತೆ, ಬಂಜೆತನ ನಿವಾರಣೆಯ ನಾಟಿ ವೈದ್ಯೆ ಕೆ.ಟಿ. ಲಕ್ಷ್ಮಮ್ಮ ಅವರು ಚನ್ನಪಟ್ಟಣ ತಾಲೂಕಿಗೆ ಹೆಮ್ಮೆ ತಂದಿದ್ದಾರೆ..

Ayurvedic Doctor KT Lakshmamma
ನಾಟಿ ವೈದ್ಯೆಗೆ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್

By

Published : Dec 18, 2021, 3:00 PM IST

ರಾಮನಗರ :ಸಂತಾನ ಇಲ್ಲದ ನೂರಾರು ದಂಪತಿಗೆ ಈ ಮಹಿಳೆ ಸಂತಾನ ಲಕ್ಷ್ಮಿಯಾಗಿದ್ದಾರೆ. ಮಕ್ಕಳಿಲ್ಲದ ಎಷ್ಟೋ ಕುಟುಂಬದವರ ಬಾಳಲ್ಲಿ ಬೆಳಕಾಗಿದ್ದಾರೆ. ತಮ್ಮದೇ ಆದ ಟ್ರಸ್ಟ್ ಮಾಡಿಕೊಂಡು ಎಲೆಮರೆಕಾಯಿಯಂತೆ ನೂರಾರು ಸಾಮಾಜಿಕ ಸೇವೆ ಮಾಡಿದ್ದಾರೆ.

ಇವರ ಸಾಧನೆ ಗುರುತಿಸಿ ದೆಹಲಿಯಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡಮಿ ವತಿಯಿಂದ '2021ರ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್' ನೀಡಲಾಗಿದೆ.

ಬಂಜೆಯರ ಬಾಳಲ್ಲಿ ಬೆಳಕಾದ ನಾಟಿ ವೈದ್ಯೆಗೆ '2021ರ ಭಗವಾನ್ ಬುದ್ಧ ನ್ಯಾಷನಲ್‌ ಅವಾರ್ಡ್'..

ಬಂಜೆಯರ ಬಾಳಲ್ಲಿ ಬೆಳಕಾದ ನಾಟಿ ವೈದ್ಯೆ :ಸ್ತ್ರೀ ಅಥವಾ ಪುರುಷರ ಹಲವು ಕಾರಣಗಳಿಂದ ಕೆಲ ದಂಪತಿಗೆ ಸಂತಾನ ಭಾಗ್ಯ ದೊರೆತಿರುವುದಿಲ್ಲ. ಮಕ್ಕಳು ಬೇಕೆಂದು ದಂಪತಿ ಅಲೆಯದ ಆಸ್ಪತ್ರೆಗಳಿರುವುದಿಲ್ಲ. ಹೀಗೆ ಮಕ್ಕಳಿಲ್ಲ ಎಂದು ಕೊರಗುತ್ತಿರುವ ದಂಪತಿಗಳಿಗೆ ಸಂತಾನ ಭಾಗ್ಯ ದೊರಕಿಸಿಕೊಡುವ ಮಹಾ ತಾಯಿಯ ಕತೆಯಿದು.

ಇವರ ಹೆಸರು ಕೆ.ಟಿ. ಲಕ್ಷ್ಮಮ್ಮ. ಓದಿದ್ದು ಕೇವಲ 10ನೇ ತರಗತಿ. ವೈದ್ಯರನ್ನೇ ಬೆರಗುಗೊಳಿಸುವ ಶಕ್ತಿಯನ್ನ ನಾಟಿ ಔಷಧದ ಮೂಲಕ ಪಡೆದುಕೊಂಡಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಬಳಿ ಇರುವ ಹಾರೋಹಳ್ಳಿದೊಡ್ಡಿಯ ಪುಟ್ಟ ಗ್ರಾಮದಲ್ಲಿ ಇವರು ವಾಸವಿದ್ದಾರೆ.

ಸಾಮಾಜಿಕ ಸೇವೆಗೆಸಂದ ಗೌರವ :ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಕೊಡ ಮಾಡುವ '2021ರ ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್'​ಗೆ ಭಾಜನರಾಗುವ ಮೂಲಕ ಸಾಮಾಜಿಕ ಕಾರ್ಯಕರ್ತೆ, ಬಂಜೆತನ ನಿವಾರಣೆಯ ನಾಟಿ ವೈದ್ಯೆ ಕೆ.ಟಿ. ಲಕ್ಷ್ಮಮ್ಮ ಅವರು ಚನ್ನಪಟ್ಟಣ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ- ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯ 37ನೇ ವಾರ್ಷಿಕ ಸಮ್ಮೇಳನದಲ್ಲಿ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಸುಮನಕ್ಷರ್ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಕೆ.ಟಿ.ಲಕ್ಷ್ಮಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ನಾಟಿ ವೈದ್ಯೆ ಕೆ.ಟಿ.ಲಕ್ಷ್ಮಮ್ಮ ಅವರು, ಅನೇಕ ವರ್ಷಗಳಿಂದ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಬಂಜೆತನ ನಿವಾರಣೆ ನಿಟ್ಟಿನಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೇ ಹಾರೋಹಳ್ಳಿದೊಡ್ಡಿಯ ಸಿದ್ದೇಶ್ವರ ಜನಸೇವಾ ಚಾರಿಟಬಲ್ ಟ್ರಸ್ಟ್ ಮೂಲಕ ನೇತ್ರ ತಪಾಸಣಾ ಶಿಬಿರ, ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರಗಳ ಆಯೋಜನೆ ಹಾಗೂ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.

ಮದುವೆಯಾಗಿ 10 ರಿಂದ 15 ವರ್ಷಗಳಿಂದ ಮಕ್ಕಳಾಗದೇ ಇರುವವರಿಗೂ ಇವರು ಚಿಕಿತ್ಸೆ ಮಾಡಿದ ಬಳಿಕ ಮಕ್ಕಳಾದ ಇತಿಹಾಸವಿದೆ. ಇದುವರೆಗೂ ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಅನೇಕರು ಇವರಿಂದ ಔಷಧಿ ಪಡೆದು ಮಕ್ಕಳ ಭಾಗ್ಯ ಪಡೆದಿದ್ದಾರೆ.

ಯಾವ ಪ್ರತಿಫಲವನ್ನೂ ಅಪೇಕ್ಷಿಸದೇ ಅವರು ವನಸ್ಪತಿ ಔಷಧಿ ನೀಡುತ್ತಾ ಬರುತ್ತಿದ್ದಾರೆ. ಈವರೆಗೂ 5 ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಪ್ರಯೋಗ ಮಾಡಿದ್ದು, ಸಾಕಷ್ಟು ಯಶಸ್ವಿಯಾಗಿದೆ. ಈ ಕಾಯಕದಲ್ಲೇ ದೇವರನ್ನ ಕಾಣುತ್ತಿದ್ದಾರೆ. ಕರ್ಮಫಲ ನೀಡುವುದು ದೇವರಿಗೆ ಬಿಟ್ಟದ್ದು ಎಂದು ಎನ್ನುವುದು ಲಕ್ಷ್ಮಮ್ಮ ಅವರ ಅಭಿಪ್ರಾಯ.

ABOUT THE AUTHOR

...view details