ರಾಮನಗರ :ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸೆಲ್ಕೋ ಸೋಲಾರ್ ಕಂಪನಿಯು ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಬಡ ಹಾಗೂ ಮಧ್ಯಮ ವರ್ಗದ ರೈತರು, ಶ್ರಮಿಕರಿಗೆ ಅನುಕೂಲವಾಗುವ 50 ಕ್ಕೂ ಹೆಚ್ಚು ಮಾದರಿಯ ಸೌರಶಕ್ತಿ ಆಧಾರಿತ ಉತ್ಪನ್ನಗಳನ್ನು ವಿತರಿಸಿದೆ. ರಾಮನಗರ ಜಿಲ್ಲೆಯಲ್ಲಿ ಇದರ ಫಲಾನುಭವಿಗಳನ್ನು ಕಂಪನಿಯು ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಹೆಸರಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಚನ್ನಪಟ್ಟಣ ತಾಲೂಕಿನ ಎಚ್. ಬ್ಯಾಡರಹಳ್ಳಿಯಲ್ಲಿ ದೇವರಾಜಾಚಾರ್ ಅವರ ಮನೆಯಲ್ಲಿನ ಸೌರಚಾಲಿತ ಕುಲುಮೆ, ಸುಳ್ಳೇರಿ ಗ್ರಾಮದ ಮಹಿಳೆಯರಿಗೆ ನೀಡಲಾದ ಸೌರಚಾಲಿತ ಹೊಲಿಗೆ ಯಂತ್ರ, ಸೋಗಾಲಪಾಳ್ಯದ ಭಾಗ್ಯಮ್ಮ ಅವರ ಮನೆಯಲ್ಲಿನ ಸೌರಚಾಲಿತ ಹಾಲು ಕರೆಯುವ ಯಂತ್ರ, ಕನಕಪುರ ತಾಲೂಕಿನ ಕ್ವಾಟಳ್ಳಿಯ ಅಣ್ಣಯ್ಯಾಚಾರ್ ಅವರ ಮನೆಯಲ್ಲಿನ ಸೌರಚಾಲಿತ ಕುಲುಮೆ, ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿನ ರೇಣುಕಮ್ಮ ಅವರಿಗೆ ನೀಡಲಾದ ಸೌರಶಕ್ತಿ ಆಧಾರಿತ ಜೆರಾಕ್ಸ್ ಯಂತ್ರಗಳ ಕಾರ್ಯವೈಖರಿ ವೀಕ್ಷಿಸಲಾಯಿತು.
ಗಮನ ಸೆಳೆಯುತ್ತಿದೆ ಸ್ಮಾರ್ಟ್ ಕ್ಲಾಸ್ ಕಲಿಕೆ ಮಾದರಿ:ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೌರಶಕ್ತಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಕಲಿಕೆ ಮಾದರಿ ಗಮನ ಸೆಳೆಯುತ್ತಿದೆ. ಸೆಲ್ಕೋ ಕಂಪನಿಯು ನೆಕ್ಸ್ಟ್ ಎಜುಕೇಷನ್ ಎನ್ನುವ ತಂತ್ರಾಂಶ ರೂಪಿಸಿದ್ದು, ಇದರಲ್ಲಿ ಪೂರ್ವ ಪ್ರಾಥಮಿಕ ಶಾಲೆಯಿಂದ ದ್ವಿತೀಯ ಪಿಯುವರೆಗಿನ ಪಠ್ಯವನ್ನು ಸ್ಮಾರ್ಟ್ ಕ್ಲಾಸ್ ರೂಪದಲ್ಲಿ ನೀಡಲಾಗಿದೆ.
ಸರ್ಕಾರಿ ಶಾಲೆಯಲ್ಲಿನ ತರಗತಿಗಳೂ ಸ್ಮಾರ್ಟ್ ಆಗಿವೆ. ಸೌರಶಕ್ತಿ ಆಧಾರಿತ ಕಲಿಕೆ ಇದಾಗಿದ್ದು, ವಿದ್ಯುತ್‌ನ ಅಗತ್ಯವೂ ಇಲ್ಲ. ಈ ಹೊಸ ಕ್ಲಾಸ್ ಬಂದ ಮೇಲೆ ಇನ್ನಷ್ಟು ಸ್ಮಾರ್ಟ್ ಆಗಿದ್ದು, ಕಲಿಕೆ ಸುಲಭವಾಗಿದೆ ಎಂದು ಶಾಲೆಯ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಸ್ಮಾರ್ಟ್ ಕ್ಲಾಸ್‌ಗೆ ಒಟ್ಟು 1.75 ಲಕ್ಷ ರೂ. ವ್ಯಯಿಸಿದ್ದು, ಇದರಲ್ಲಿ ಶೇ. 50ರಷ್ಟನ್ನು ಶಾಲೆ ಹಾಗೂ ಉಳಿದಿದ್ದನ್ನು ಸೆಲ್ಕೋ ಸಂಸ್ಥೆಯೇ ಭರಿಸಿದೆ. 5 ವರ್ಷ ಕಾಲ ಉಚಿತ ನಿರ್ವಹಣೆ ಇರಲಿದೆ.
ಆಧುನಿಕ ಸ್ಪರ್ಶ :ರಾಮನಗರ ಜಿಲ್ಲೆಯ ಬೇವೂರು ಗ್ರಾಮದಲ್ಲಿನ ಕುಂಬಾರಿಕೆ ಕಲೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಮಡಿಕೆ – ಕುಡಿಕೆ ತಯಾರಾಗುವ ತಿರುಗು ಮಣೆಗೆ ಸೌರ ವಿದ್ಯುತ್ ಸಂಪರ್ಕ ದೊರೆತಿದ್ದು, ಇದರಿಂದ ಉತ್ಪಾದನೆ ದುಪ್ಪಟ್ಟಾಗಿ ಆದಾಯವೂ ಹೆಚ್ಚಿದೆ. ಚನ್ನಪಟ್ಟಣ ತಾಲೂಕಿನ ಈ ಗ್ರಾಮ ಕುಡಿಕೆ ಬೇವೂರು ಎಂತಲೇ ಪ್ರಸಿದ್ಧಿ.