ಬೆಂಗಳೂರು/ರಾಮನಗರ:ರಾಮನಗರದಲ್ಲಿ 73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡದ ಬಾಕಿ ಕಾಮಗಾರಿಯನ್ನು ಜೂನ್ ಹೊತ್ತಿಗೆ ಸಂಪೂರ್ಣ ಮುಗಿಸಬೇಕು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಈ ಸಂಬಂಧ ನಡೆದ ಸಭೆಯಲ್ಲಿ ಚರ್ಚಿಸಿದ ಸಚಿವರು, ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲೇ ಇರುವ ಜಾನಪದ ಲೋಕದ ಬಳಿ ನಿರ್ಮಾಣವಾಗುತ್ತಿರುವ ಕ್ಯಾಂಪಸ್ಅನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಅಗತ್ಯವಾದ ಸುಸಜ್ಜಿತ ಹಾಸ್ಟೆಲ್, ಪ್ರಯೋಗಾಲಯ, ತರಗತಿಗಳು, ಗ್ರಂಥಾಲಯ, ನೀರು ಮತ್ತು ಒಳಚರಂಡಿ ಸೌಲಭ್ಯಗಳು, ವಾಕ್ಪಥಗಳು ಕಡ್ಡಾಯವಾಗಿ ಇರಬೇಕು. ಇದರ ಜತೆಗೆ ಕ್ಯಾಂಪಸ್ ಆಕರ್ಷಕವಾಗಿದ್ದು, ಅತ್ಯಂತ ಸುಸಜ್ಜಿತವಾಗಿ ಹೈಟೆಕ್ ದರ್ಜೆಯ ಕ್ಯಾಂಪಸ್ ಆಗಿ ತಲೆಯೆತ್ತಬೇಕು. 2022-23ನೇ ಶೈಕ್ಷಣಿಕ ಸಾಲಿನ ತರಗತಿಗಳು ಹೊಸ ಕ್ಯಾಂಪಸ್ಸಿನಲ್ಲೇ ನಡೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಈ ಕಾಲೇಜಿನಲ್ಲಿ ರಾಮನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ವೃತ್ತಿಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆ ಇದ್ದು, ಸ್ಥಳೀಯ ಸಮುದಾಯಕ್ಕೆ ಇದರ ಲಾಭ ದೊರಕುವಂತಾಗಬೇಕು ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಮನಗರ ಜಿಲ್ಲೆಯ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಗೋಪಾಲ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.