ರಾಮನಗರ:ಪುರಾಣಪ್ರಸಿದ್ಧ ಮಾಗಡಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನವನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ತಿಳಿಸಿದರು. ಇಂದು ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿದೆ. ಅದರಂತೆ ಪ್ರವಾಸೋದ್ಯಮ ವಿಷನ್ ಗ್ರೂಪ್ ನೀಡಿರುವ ಸಲಹೆ ಪ್ರಕಾರ, ಮಾಗಡಿ ರಂಗನಾಥ ದೇಗುಲವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಈ ದೇವಸ್ಥಾನದಲ್ಲಿರುವ ಉದ್ಭವಮೂರ್ತಿ ಮತ್ತು ರಂಗನಾಥನ ಪ್ರತಿಮೆಗಳು ಭಕ್ತರ ಪಾಲಿಗೆ ನೆಮ್ಮದಿಯ ತಾಣಗಳಾಗಿವೆ. ಮಾಗಡಿಯ ಆಕರ್ಷಣೆಯನ್ನು ಹೆಚ್ಚಿಸುವ ರೀತಿಯಲ್ಲಿ ದೇವಸ್ಥಾನದ ಅಭಿವೃದ್ದಿ ನಡೆಯಲಿದೆ ಎಂದು ಭರವಸೆ ನೀಡಿದರು.