ರಾಮನಗರ:ಸಾಲುಮರದ ತಿಮ್ಮಕ್ಕನ ಮಾದರಿಯಲ್ಲಿಯೇ ಇಲ್ಲೊಬ್ಬರು ಸಾಲು ಮರಗಳನ್ನು ಕಳೆದ 20 ವರ್ಷಗಳಿಂದ ಸಂರಕ್ಷಿಸಿ ಪೋಷಿಸುತ್ತಿದ್ದಾರೆ. ಹೆಂಡತಿ ತಾಳಿ ಅಡಮಾನವಿಟ್ಟು ಸಸಿಗಳಿಗೆ ಕಿ.ಮೀ.ಗಟ್ಟಲೆ ನಡೆದುಕೊಂಡೇ ನೀರು ಹಾಯಿಸಿ ಗಿಡಗಳ ಸಂರಕ್ಷಣೆ ಮಾಡಿ ಪರಿಸರ ಪ್ರೇಮ ಮೆರೆದಿದ್ದಾರೆ.
ಇವರ ಹೆಸರು ಲಿಂಗಣ್ಣ. ಸಾಲು ಮರದ ಲಿಂಗಣ್ಣ ಎಂದೇ ಹೆಸರುವಾಸಿ. ತುಂಡು ಭೂಮಿ ನೀಡುವಂತೆ ಕಳೆದ 5 ವರ್ಷಗಳಿಂದ ಸರ್ಕಾರವನ್ನು ಗೊಗರೆಯುತ್ತಿರುವ ವೃಕ್ಷ ಸಂರಕ್ಷಕ ಲಿಂಗಣ್ಣ ಅವರ ಬೇಡಿಕೆ ಕೇವಲ ಕಚೇರಿಗಳ ಪತ್ರಗಳಲ್ಲಿ ಉಳಿದಿದೆ. ರಾಜಭವನದಿಂದ ಹಿಡಿದು ತಹಶೀಲ್ದಾರ್ ಕಚೇರಿವರೆಗೂ ಕೇವಲ ಪತ್ರ ಬರೆಯುವಲ್ಲಿಯೇ ನಿರತರವಾಗಿರುವ ಇವರಿಗೆ ಸರ್ಕಾರ ಜೀವನ ನಿರ್ವಹಣೆಗೆ ಸಹಾಯ ಹಸ್ತ ಚಾಚುವಲ್ಲಿ ವಿಫಲವಾಗಿದೆ.
ರಾಮನಗರದ ಕೂಟಗಲ್ ಹೋಬಳಿಯ ಅರೇಹಳ್ಳಿ ಗ್ರಾಮದ ಲಿಂಗಣ್ಣ ಅವರು ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ಮರಗಳನ್ನು ನೆಟ್ಟು ಕಳೆದ 20 ವರ್ಷಗಳಿಂದ ಪೋಷಿಸುತ್ತಿದ್ದಾರೆ. ಸುಮಾರು 950 ಮರಗಳನ್ನು ಪೋಷಿಸಿದ್ದು, ಕಣ್ವ ಲೇಔಟ್‌ನಲ್ಲಿಯೂ ಮರಗಳನ್ನು ಸಲುಹುತ್ತಿದ್ದಾರೆ. ಟ್ಯಾಂಕರ್ ನೀರಿನಲ್ಲಿ ಮರಗಳನ್ನು ಸಾಕಿದ್ದ ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಸಹ ಹುಡುಕಿಕೊಂಡು ಬಂದಿವೆ.
ಆದರೆ ಜೀವನ ನಿರ್ವಹಣೆಗೆ 5 ಎಕರೆ ಭೂಮಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಂಬಂಧಿಸಿದ ಇಲಾಖೆಗಳ ಕಿವಿ ಕಿವುಡಾಗಿದೆ. ಮರಗಳನ್ನು ಸಲಹುತ್ತಿರುವ ಈತ ಇದೀಗ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ 18 ವರ್ಷಗಳ ಹಿಂದೆ ಕೂನಮುದ್ದನಹಳ್ಳಿ ಹೊರಭಾಗದಲ್ಲಿರುವ ಕೋಡಿಬಸವೇಶ್ವರ ದೇವಾಲಯದ ಆವರಣದಲ್ಲಿನ ಗುಂಡುತೋಪು ಮರಗಳಿಲ್ಲದೆ ಭಣಗುಡುತ್ತಿತ್ತು. ಇದನ್ನು ಕಂಡ ನಿಂಗಣ್ಣ ಸುಮಾರು 300 ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯಿಂದ ತಂದು ನೆಟ್ಟು ಪೋಷಿಸಿದರು.