ಕರ್ನಾಟಕ

karnataka

ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣನ ದೇಗುಲದಲ್ಲಿ ಜನ್ಮಾಷ್ಟಮಿ ಆಚರಣೆ.. ಇಲ್ಲಿ ಹರಕೆ ಹೊತ್ತರೆ ಸಂತಾನ ಪ್ರಾಪ್ತಿ

By

Published : Aug 20, 2022, 6:12 PM IST

ದೊಡ್ಡಮಳೂರಿನ ವ್ಯಾಸರಾಜರು ಪ್ರತಿಷ್ಠಾಪಿಸಿದ ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣ ದೇವಸ್ಥಾನದಲ್ಲಿ 5 ದಿನಗಳ ಕಾಲ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ.

R_kn_rmn_02_19082022_Ambegalu_Temple_KA10051
ಅಂಬೆಗಾಲು ಕೃಷ್ಣನ ದೇಗುಲ

ರಾಮನಗರ:ಬೊಂಬೆನಗರಿ ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರಿನ ಶ್ರೀರಾಮಾ ಅಪ್ರಮೇಯಸ್ವಾಮಿ ದೇವಾಲಯ ಐತಿಹಾಸಿಕವಾಗಿ ರಾಷ್ಟ್ರ ಪ್ರಸಿದ್ಧಿ ಪಡೆದಿದ್ದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಣ್ಣೆ ಅಲಂಕಾರ ಕಣ್ತುಂಬಿಕೊಳ್ಳಲು ಶುಕ್ರವಾರ ರಾಜ್ಯದ ನಾನಾ ಭಾಗದ ಭಕ್ತರು ದೇಗುಲಕ್ಕೆ ಆಗಮಿಸಿದರು.

ರಾಜ್ಯ ಸೇರಿದಂತೆ ಉತ್ತರ ಭಾರತ, ತಮಿಳುನಾಡು, ಆಂಧ್ರಪ್ರದೇಶದಿಂದ ಭಕ್ತರು ಇಲ್ಲಿಗೆ ಭೇಟಿ ನೀಡಿ ಅಂಬೆಗಾಲು ಕೃಷ್ಣನ ದರ್ಶನ ಪಡೆದರು. ವ್ಯಾಸ ತೀರ್ಥರು ಈ ದೇವಾಲಯವನ್ನು ಪ್ರತಿಷ್ಠಾಪಿಸಿದ್ದು, ಅಂಬೆಗಾಲು ಬೆಣ್ಣೆ ಕೃಷ್ಣನ ವಿಗ್ರಹ ದೇವಾಲಯಕ್ಕೆ ಆಗಮಿಸುವ ಭಕ್ತರ ಕಣ್ಮನ ಸೆಳೆಯುತ್ತದೆ.

ನವನೀತ ಚೋರ, ನಂದಕಿಶೋರ, ಮುರಳಿ ಮೋಹನ, ಗೋಪಿ ನಂದನ, ರುಕ್ಮಿಣಿ ಲೋಲ ಎಂಬ ನಾಮಂಕಿತಗಳಿಂದ ಕರೆಸಿಕೊಳ್ಳುವ ಅಂಬೆಗಾಲಿಡುತ್ತಿರುವ ಬಂಗಿಯಲ್ಲಿರುವ ಕೃಷ್ಣನ ದೇವಾಲಯ ವಿಶೇಷ ಮಹತ್ವ ಪಡೆದಿದೆ. ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿಗಳು ಈ ದೇವಾಲಯಕ್ಕೆ ಆಗಮಿಸಿ ಬೆಣ್ಣೆ ಕೃಷ್ಣನ ಮಂದಿರದಲ್ಲಿ ತೊಟ್ಟಿಲು ಕಟ್ಟುವ ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎಂಬ ಅಚಲವಾದ ನಂಬಿಕೆ ಇದೆ. ಹರಕೆ ಹೊತ್ತ ದಂಪತಿಗಳು ಮಕ್ಕಳಾದ ಬಳಿಕ ಮಗುವಿನೊಂದಿಗೆ ಆಗಮಿಸಿ ತೊಟ್ಟಿಲು ಕೊಟ್ಟಿ ಹರಕೆಯನ್ನು ತೀರಿಸುತ್ತಾರೆ.

ಅಂಬೆಗಾಲು ಕೃಷ್ಣನ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ

ದೇಗುಲದಲ್ಲಿ ನಿರಂತರ ಕಾರ್ಯಕ್ರಮಗಳು: ಅಪ್ರಮೇಯಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ಅಂಬೆಗಾಲು ಶ್ರೀಕೃಷ್ಣ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು, ಜನ್ಮಾಷ್ಟಮಿ ಪ್ರಯುಕ್ತ ದೇವಾಲಯದಲ್ಲಿ ಆಗಸ್ಟ್ 19 ರಿಂದ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಆ.23 ವರೆಗೆ ದೇವರಿಗೆ ವಿಶೇಷ ಪೂಜೆ ಸೇರಿದಂತೆ ಸಂಗೀತ ಹಾಗೂ ಭಕ್ತಿಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 5 ದಿನಗಳ ಕಾಲ ಕೃಷ್ಣನ ಸ್ಮರಣೆ ಶ್ರೀಕ್ಷೇತ್ರದಲ್ಲಿ ನಡೆಯಲಿದ್ದು, ಆಡಳಿತ ಮಂಡಳಿಯ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ದೇಶದಲ್ಲಿಯೇ ಅಪರೂಪದ ಈ ಅಂಬೆಗಾಲು ಕೃಷ್ಣ:ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಅಪ್ರಮೇಯ ದೇವಾಲಯಕ್ಕೆ ಪುರಾಣದ ಹಿನ್ನೆಲೆಯಿದೆ. ಈ ವಿಗ್ರಹವನ್ನು ವ್ಯಾಸರಾಜ ತೀರ್ಥರು ಪ್ರತಿಷ್ಟಾಪಿಸಿದರು ಎಂಬ ಪ್ರತೀತಿ ಇದ್ದು, ಸುಮಾರು 900 ವರ್ಷಗಳಷ್ಟು ಹಳೆಯದಾದ ಶ್ರೀಕೃಷ್ಣನ ಮೂರ್ತಿಯನ್ನು ನೋಡಿ ಪ್ರೇರಿತರಾದ ಪುರಂದರದಾಸರು ಆಡಿಸಿದಳು ಯಶೋಧೆ ಎಂಬ ಕೀರ್ತನೆಯನ್ನು ರಚಿಸಿದ್ದರು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನ ಬಾಲಲೀಲೆಯನ್ನು ಬಿಂಬಿಸುವ ಜಗತ್ತಿನ ಏಕೈಕ ಶಿಲಾವಿಗ್ರಹ ಇದಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿಯೇ 2ನೇ ಶ್ರೀಕೃಷ್ಣ ದೇವಸ್ಥಾನ ಚಿಕ್ಕಬಳ್ಳಾಪುರದಲ್ಲಿ ಪ್ರತಿಷ್ಠಾಪನೆ

ABOUT THE AUTHOR

...view details