ರಾಮನಗರ/ಬೆಂಗಳೂರು:ನನ್ನ ಮಗಳಿಗೆ ಹಲವು ಒತ್ತಡ ಇದ್ದರೂ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಳು. ಅವಳ ಸಾವಿನ ಬಗ್ಗೆ ಅನುಮಾನ ಇದೆ. ನಾನು ದೂರಿನಲ್ಲಿ ಇಬ್ಬರ ಹೆಸರು ಸೂಚಿಸಿದ್ದೇನೆ. ನನ್ನ ಮಗಳು ಅಪಾರ್ಟ್ಮೆಂಟ್ನಲ್ಲಿ ಒಬ್ಬಳೆ ಇದ್ದಳು ಎಂದು ನಟಿ ಸೌಜನ್ಯ ತಂದೆ ಪ್ರಭು ಮಾದಪ್ಪ ತಿಳಿಸಿದ್ದಾರೆ.
ನಟಿ ಸೌಜನ್ಯ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂಬಳಗೂಡು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್ ಅಪಾರ್ಟ್ಮೆಂಟ್ನ ಫ್ಲಾಟ್ ನಂ. 901ರಲ್ಲಿ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೌಜನ್ಯ ಇಂಗ್ಲಿಷ್ನಲ್ಲಿ ಬರೆದಿರುವ 4 ಪುಟದ ಡೆತ್ನೋಟ್ ಪತ್ತೆಯಾಗಿತ್ತು. ಮಹಜರು ವೇಳೆ ನಟಿ ತಂದೆ ಪ್ರಭು ಮಾದಪ್ಪ ಹಾಗೂ ಸಹೋದರ ಕೂಡ ಆಗಮಿಸಿದ್ದರು.
ಈ ವೇಳೆ, ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಭು ಮಾದಪ್ಪ, ನನ್ನ ಮಗಳು ಅಪಾರ್ಟ್ಮೆಂಟ್ನಲ್ಲಿ ಒಬ್ಬಳೆ ಇದ್ದಳು. ಅಲ್ಲದೇ ಕಾಲ್ ಮಾಡಿ ಕೊಡಗಿಗೆ ಬರುತ್ತೇನೆ ಎಂದಿದ್ದ ಅವಳು, ಮೂರು ದಿನ ಅಲ್ಲೇ ಇರುತ್ತೇನೆ ಎಂದೂ ಕೂಡ ಹೇಳಿದ್ದಳು. ಆದರೆ ಮಗಳ ಸಾವಾಗಿದೆ. ಕೊಡಗಿನ ನಮ್ಮ ಊರು ಕುಶಾಲನಗರ ತಾಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದರು.