ಕರ್ನಾಟಕ

karnataka

ETV Bharat / state

ಡ್ರಾಪ್... ಕಿಡ್ನಾಪ್... ದರೋಡೆ... ಚೇಜ್ ಮಾಡಿ ಖದೀಮರಿಗೆ ಕೋಳ ತೊಡಿಸಿದ ಪೊಲೀಸರು - ಡ್ರಾಪ್.. ಕಿಡ್ನಾಪ್.. ದರೋಡೆ

ಅಮಾಯಕರಿಗೆ ಕಾರಿನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಕಿಡ್ನಾಪ್ ಮಾಡಿ ಅವರನ್ನು ಹೆದರಿಸಿ ಹಣ, ಒಡೆವೆ ಸುಲಿಗೆ ಮಾಡುತ್ತಿದ್ದ ಖದೀಮರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಕತರ್ನಾಕ್​ ಖದೀಮರ ಬಂಧನ

By

Published : Oct 6, 2019, 10:23 AM IST

ರಾಮನಗರ:ರಾತ್ರಿ ವೇಳೆ ಅಮಾಯಕರಿಗೆ ಡ್ರಾಪ್ ನೀಡುವುದಾಗಿ ನಂಬಿಸಿ, ಕಿಡ್ನಾಪ್ ಮಾಡಿ ಬಳಿಕ ಚಾಕು ಮತ್ತು ನಕಲಿ ಗನ್ ತೋರಿಸಿ ಅವರಿಂದ ಹಣ, ಒಡವೆಗಳನ್ನು ಸುಲಿಗೆ ಮಾಡುತ್ತಿದ್ದ ಖದೀಮರ ತಂಡವನ್ನು ರಾಮನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಸಲೀಂ ಪಾಷ, ಅಬ್ದುಲ್ ಸುಲೆಮಾನ್ ಮತ್ತು ರಾಜೇಶ್ ರಾಯ್​ ಬಂಧಿತ ಆರೋಪಿಗಳು. ಇವರು ಬೆಂಗಳೂರು ನಗರದ ಸಿದ್ದಾಪುರ, ಜಯನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿ ಇತ್ತೀಚಿಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆದರೆ ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು ಕೆಆರ್ ಪುರಂನಲ್ಲಿ ನಾಗರಾಜ್ ಎಂಬವರಿಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ರಾಮನಗರದ ಕಡೆ ಬರುವಾಗ ಬಿಡದಿಯ ಬೈರಮಂಗಲ ಚೆಕ್ ಪೋಸ್ಟ್​​ ಬಳಿ ಪೊಲೀಸರನ್ನು ಕಂಡು ನಾಗರಾಜ್ ಸಹಾಯಕ್ಕಾಗಿ ಕೂಗಿಕೊಂಡಾಗ ಕರ್ತವ್ಯದಲಿದ್ದ ಪೊಲೀಸ್ ಸಿಬ್ಬಂದಿ, ಕಾರನ್ನು ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇದೇ ಆರೋಪಿಗಳು ಸೆ.22 ರಂದು ಜೊಸೆಫ್ ಮ್ಯಾಥ್ಯೂ ಎಂಬುವರನ್ನು ಬೆಂಗಳೂರು ನಗರದ ಹೆಬ್ಬಾಳ ಫ್ಲೈ ಓವರ್ ಬಳಿ ಡ್ರಾಪ್ ನೀಡುವುದಾಗಿ ನಂಬಿಸಿ, ಕಾರಿಗೆ ಹತ್ತಿಸಿಕೊಂಡು ನಂತರ ಚಾಕು ಮತ್ತು ಗನ್ ತೋರಿಸಿ ಅವರ ಬಳಿ ಇದ್ದ ಹಣ, ಸರ, ಒಡವೆ ಮತ್ತು ಎಟಿಎಂ ಕಾರ್ಡ್​ ಕಿತ್ತುಕೊಂಡಿದ್ದರು. ಬಳಿಕ ಅವರ ಕೈಯಿಂದಲೇ ಎಟಿಎಂನಿಂದ 24,000 ರೂ. ಡ್ರಾ ಮಾಡಿಸಿಕೊಂಡು ನಂತರ ಚಾಕುವಿನಿಂದ ಹಲ್ಲೆ ನಡೆಸಿ, ಬಿಡದಿ ಬಳಿಯ ಶೇಷಗಿರಿಹಳ್ಳಿ ಬಳಿ ಕಾರಿನಿಂದ ಹೊರದಬ್ಬಿ ಪರಾರಿಯಾಗಿದ್ದರು.

ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, ಚಾಕು, ನಕಲಿ ಗನ್, ಮೊಬೈಲ್ ಫೋನ್ ಮತ್ತು 14,600 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಬಿಡದಿ ಮತ್ತು ಸಂಪಿಗೆ ನಗರ ಪೊಲೀಸ್ ಠಾಣೆಯ ಅನೇಕ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.

ABOUT THE AUTHOR

...view details