ರಾಮನಗರ:ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಬಿಡದಿ ಸಮೀಪದ ಕೆಂಪನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು ಸನಾವುಲ್ಲಾ ಬೇಗ್ (65) ಹಾಗೂ ನೂರ್‌ಜಹಾನ್ (60) ಎಂದು ಗುರುತಿಸಲಾಗಿದೆ. ಮೃತ ದಂಪತಿ ಬೆಂಗಳೂರಿನ ಬಾಪೂಜಿ ನಗರ ನಿವಾಸಿಗಳಾಗಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ರಾಮನಗರಕ್ಕೆ ಬಂದಿದ್ದ ಇಬ್ಬರು ಕಳೆದ ರಾತ್ರಿ ವಾಪಸ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೆಟ್ಟು ನಿಂತಿದ್ದ ಲಾರಿಗೆ ರಿಫ್ಲೆಕ್ಟರ್ ಇಲ್ಲದ ಕಾರಣ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಯಂತ್ರಣ ತಪ್ಪಿ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ- ಇಬ್ಬರು ಸಾವು: ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಅಪ್ರಾಪ್ತ ವಯಸ್ಸಿನ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ಬುಧವಾರ ನಡೆದಿತ್ತು. ಬುಧವಾರ ರಾತ್ರಿ ವೇಳೆ ಇಬ್ಬರೂ ಮಂಗಳೂರು ನಗರದಿಂದ ಪದವಿನಂಗಡಿ ಕಡೆಗೆ ಸ್ಕೂಟರ್ ನಲ್ಲಿ ಅತಿ ವೇಗವಾಗಿ ಹೋಗುತ್ತಿದ್ದು, ಮೇರಿಹಿಲ್ ಬಳಿ ನಿಯಂತ್ರಣ ತಪ್ಪಿ ಸ್ಕೂಟರ್ ಡಿವೈಡರ್ ಗೆ ಡಿಕ್ಕಿಯಾಗಿತ್ತು. ಇಬ್ಬರಲ್ಲಿ ಒಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದು, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.