ರಾಮನಗರ: ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಯುವಕನೋರ್ವ ಕಾಡಾನೆ ದಾಳಿಗೆ ಬಲಿಯಾಗಿದ್ದಾನೆ. ಕನಕಪುರ ತಾಲೂಕಿನ ಟಿ.ಬೇಕುಪ್ಪೆ ನಿವಾಸಿ ಚೇತನ್ (25) ಮೃತ ಯುವಕ.
ಜಿಲ್ಲೆಯ ಕನಕಪುರ ತಾಲೂಕಿನ ನಾರಾಯಣಪುರ ಗ್ರಾಮದ ಯುವಕ ಚೇತನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನದಂತೆ ಇಂದು ಬೆಳಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ವಾಕಿಂಗ್ ಹೋಗಿದ್ದರು. ನಾಲ್ವರು ಕೋಡಿಹಳ್ಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿದ್ದ ಜಮೀನಿನ ಬೇಲಿಯ ಮರೆಯಲ್ಲಿದ್ದ ಕಾಡಾನೆಗಳು ಏಕಾಏಕಿ ದಾಳಿ ನಡೆಸಿವೆ. ತಪ್ಪಿಸಿಕೊಳ್ಳಲು ನಾಲ್ವರು ಓಡಿದ್ದಾರೆ. ಆದರೆ ಚೇತನ ಆನೆ ತುಳಿತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಯುವಕ ಚೇತನ್ ಕಾಡಾನೆ ದಾಳಿಗೆ ಬಲಿ ನಗರಕ್ಕೆ ಕೇವಲ ಕೂಗಳತೆ ದೂರದಲ್ಲಿರುವ ನಾರಾಯಣಪುರ ಕಾಡಂಚಿನ ಗ್ರಾಮವಾಗಿದ್ದು, ಕಾಡಾನೆಗಳ ಈ ದಾಳಿ ನಗರ ಪ್ರದೇಶದ ವಾಸಿಗಳಲ್ಲೂ ಆತಂಕ ಮೂಡಿಸಿದೆ. ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ದಾಳಿ ನಡೆಸಿ, ರೈತರ ಬೆಳೆ ಹಾಳು ಮಾಡುತ್ತಿವೆ. ಅರಣ್ಯಾಧಿಕಾರಿಗಳು ಆನೆ ಹಾವಳಿ ತಪ್ಪಿಸಲು ಕ್ರಮ ಕೈಗೊಂಡಿಲ್ಲ ಎಂದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ಹಿಂತಿರುಗಿಸಲಿದ್ದಾರೆ.