ರಾಮನಗರ:ಟೋಲ್ ಗೇಟ್ನಲ್ಲಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯ ಸಿಕ್ಕೆಪಾಳ್ಯ ನಿವಾಸಿ ಪವನ್ ನಾಯಕ್ ಮೃತ ದುರ್ದೈವಿಯಾಗಿದ್ದಾನೆ. ಹತ್ಯೆಗೀಡಾದ ಪವನ್ ಕುಮಾರ್ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಕೆಲಸ ಮಾಡುತ್ತಿದ್ದನು.
ಬೆಂಗಳೂರು ಮೂಲದ ಯುವಕರ ಗುಂಪು ಹಣದ ವಿಚಾರವಾಗಿ ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ನಾಯಕ್ ಜೊತೆಗೆ ಕಳೆದ ರಾತ್ರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರು ಕೆಲಸ ಮುಗಿಸಿ ಊಟಕ್ಕೆ ಹೋಗಿದ್ದಾಗ ಪವನ್ಗೆ ಹಾಕಿ ಸ್ಟಿಕ್ನಿಂದ ಹೊಡೆದು ಕೊಲೆ ಮಾಡಲಾಗಿದೆ. ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಗಲಾಟೆ ನಡೆದಿದ್ದು, 12 ಗಂಟೆಗೆ ವೇಳೆಗೆ ಯುವಕರ ಗುಂಪು ಹೆಜ್ಜಾಲ ಸಮೀಪ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಮೃತದೇಹವನ್ನು ಬೆಂಗಳೂರು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ:''ಭಾನುವಾರ ತಡರಾತ್ರಿ ಸುಮಾರು 12ರಿಂದ 1 ಗಂಟೆ ಸುಮಾರಿಗೆ ಶೇಷಗಿರಿ ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪವನ್ ಕುಮಾರ್ ನಾಯಕ್ ಎಂಬುವರ ಕೊಲೆ ಮಾಡಲಾಗಿದೆ. ಅಪರಿಚಿತರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆಗೂ ಮುನ್ನ ರಾತ್ರಿ ಸುಮಾರು 9.30ರ ಸುಮಾರಿಗೆ ಟೋಲ್ನಲ್ಲಿ ಕಾರಿಗೆ ಗೇಟ್ ತೆಗೆಯುವುದು ಲೇಟ್ ಆದ ಕಾರಣಕ್ಕೆ ಸಂಬಂಧ ಗಲಾಟೆ ನಡೆದಿತ್ತು ಎಂಬುದು ಸಿಸಿಟಿವಿ ಪರಿಶೀಲಿಸಿದಾಗ ಗೊತ್ತಾಗಿದೆ'' ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.