ರಾಮನಗರ: ಕಳ್ಳತನಕ್ಕೆ ಬಂದ ದುಷ್ಕರ್ಮಿಗಳು ಮಹಿಳೆಯ ಕತ್ತುಕುಯ್ದು ಬರ್ಬರ ಹತ್ಯೆಗೈದಿರುವ ಘಟನೆ ಚನ್ನಪಟ್ಟಣ ನಗರದ ಹೌಸಿಂಗ್ ಬೋರ್ಡ್ನಲ್ಲಿ ನಡೆದಿದೆ. ಗೀತಾ(32) ಕೊಲೆಯಾದ ಮಹಿಳೆ. ಹಾಡಹಗಲೇ ನಡೆದ ಭೀಕರ ಕೊಲೆಗೆ ಚನ್ನಪಟ್ಟಣ ಬೆಚ್ಚಿಬಿದ್ದಿದೆ.
ಮೃತರ ಪತಿ ಎಲೆ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆವರೆಗೂ ಗಂಡ ಮನೆಯಲ್ಲೇ ಇದ್ದರು. ನಂತರ ಗಂಡ ಕೆಲಸಕ್ಕೆ ಹೋದ ಬಳಿಕ 1 ಗಂಟೆಯೊಳಗೆ ಮಹಿಳೆಯ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸಂಜೆ ಮಕ್ಕಳು ಶಾಲೆಯಿಂದ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾಡಹಗಲೇ ನಡೆದ ಭೀಕರ ಕೊಲೆಗೆ ಸುತ್ತ ಮುತ್ತಲ ಬಡಾವಣೆ ನಿವಾಸಿಗಳು ಕೂಡ ಬೆಚ್ಚಿ ಬಿದ್ದಿದ್ದಾರೆ.
(ಇದನ್ನೂ ಓದಿ: ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ಮೂತ್ರ ಕುಡಿಸಿ, ವಿಡಿಯೋ ಮಾಡಿದ ಕಿರಾತಕರು!)
ಇತ್ತೀಚಿನ ದಿನಗಳಲ್ಲಿ ನಗರದ ಹೌಸಿಂಗ್ ಬೋರ್ಡ್ ನಿವಾಸಿಗಳು ಭಯದ ನೆರಳಿನಲ್ಲಿ ಜೀವನ ಸಾಗಿಸುವಂತಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಒಂಟಿ ಮನೆಯನ್ನ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಮಹಿಳೆ ಕೊಲೆ ಮಾಡಿ, ಮನೆಯಲ್ಲಿನ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಸಿಸಿ ಕ್ಯಾಮರಾದಿಂದ ಮಾಹಿತಿ ಸಂಗ್ರಹ:ಪೋಲೀಸರು ಕೂಡ ಕೊಲೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಮನೆಯ ಸುತ್ತಲಿನ ಬಡಾವಣೆ ನಿವಾಸಿಗಳು ಹಾಕಿಸಿದ ಸಿಸಿ ಕ್ಯಾಮರಾ ವಿಡಿಯೋವನ್ನ ಸಂಗ್ರಹ ಮಾಡಿದ್ದಾರೆ. ಕೊಲೆ ಬಗ್ಗೆ ಕೂಡ ಪೊಲೀಸರಿಗೆ ಹಲವು ಸುಳಿವು ಪತ್ತೆಯಾಗಿವೆ. ಬಡಾವಣೆಯ ಹಲವು ಮನೆಗಳ ಸಿಸಿ ಕ್ಯಾಮರಾ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ದಳದ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಚನ್ನಪಟ್ಟಣ ಡಿವೈಎಸ್ಪಿ ಒಂಪ್ರಕಾಶ್, ಗ್ರಾಮಾಂತರ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆದಿದೆ.